ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, 54 ವರ್ಷಗಳ ಬಳಿಕ ಮತ್ತೆ ಚಂದ್ರನತ್ತ ಮಾನವಸಹಿತ ಗಗನಯಾನವನ್ನು ಆರಂಭಿಸಿದೆ. ಈ ಯೋಜನೆಯಡಿಯಲ್ಲಿ ನಾಲ್ವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ.
ಈ ತಂಡದಲ್ಲಿ ಕಮಾಂಡರ್ ರೀಡ್ ವೈಸ್ಮನ್, ಪೈಲಟ್ಗಳಾದ ವಿಕ್ಟರ್ ಗ್ಲೋವರ್ ಮತ್ತು ಕ್ರಿಸ್ಟಿನಾ ಕೋಚ್, ಜೊತೆಗೆ ಕೆನಡಾದ ಗಗನಯಾತ್ರಿ ಜೆರೆಮಿ ಹ್ಯಾನ್ಸನ್ ಸೇರಿದ್ದಾರೆ.
1972ರಲ್ಲಿ ನಡೆದ ಅಪೊಲೊ 17 ಗಗನಯಾನದ ಬಳಿಕ ಇದು ಚಂದ್ರನತ್ತ ಸಾಗುತ್ತಿರುವ ಮೊದಲ ಮಾನವಸಹಿತ ಗಗನಯಾನವಾಗಿದೆ. ಈ ಯಾನಕ್ಕೆ ಭಾರಿ ಉಡಾವಣಾ ರಾಕೆಟ್ ಮತ್ತು ಒರಿಯನ್ ಬಾಹ್ಯಾಕಾಶ ನೌಕೆಯನ್ನು ಬಳಸಲಾಗಿದೆ.
ಸುಮಾರು 10 ದಿನಗಳ ಈ ಗಗನಯಾನ ಏಪ್ರಿಲ್ 1ರಂದು ಉಡಾವಣೆಯಾಗಿದ್ದು, ಏಪ್ರಿಲ್ 10 ಅಥವಾ 11ರಂದು ಭೂಮಿಗೆ ಮರಳುವ ನಿರೀಕ್ಷೆಯಿದೆ. ಈ ಪ್ರಯಾಣದಲ್ಲಿ ಗಗನಯಾತ್ರಿಗಳು ಚಂದ್ರನ ಮೇಲೆ ಇಳಿಯುವುದಿಲ್ಲ; ಬದಲಿಗೆ ಚಂದ್ರನ ಸುತ್ತ ಪ್ರದಕ್ಷಿಣೆ ಮಾಡಿ ಭೂಮಿಗೆ ವಾಪಸ್ಸಾಗುತ್ತಾರೆ.
ಈ ಗಗನಯಾನದ ಮುಖ್ಯ ಉದ್ದೇಶ ಬಾಹ್ಯಾಕಾಶ ನೌಕೆಯ ಜೀವ ರಕ್ಷಕ ವ್ಯವಸ್ಥೆಗಳ ಸುರಕ್ಷತೆಯನ್ನು ಪರೀಕ್ಷಿಸುವುದಾಗಿದೆ. ಮುಂದಿನ ದಿನಗಳಲ್ಲಿ ಮಾನವರನ್ನು ಚಂದ್ರನ ಮೇಲೆ ಇಳಿಸುವ ಮಹತ್ವದ ಯೋಜನೆಗಳಿಗೆ ಇದು ಮೊದಲ ಹಂತವಾಗಿದೆ.



