ತುಮಕೂರು:- ತುಮಕೂರಿನ ಜಯನಗರ ಠಾಣಾ ವ್ಯಾಪ್ತಿಯಲ್ಲಿ ಹೆಂಡ್ತಿ ಕಿರುಕುಳ ತಾಳಲಾರದೇ ಪತಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜರುಗಿದೆ ಸಲ್ಮಾನ್ ಪಾಷಾ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಜಿಲ್ಲಾಸ್ಪತ್ರೆಗೆ ದಾಖಲಿಸಿ ಆತನಿಗೆ ಚಿಕಿತ್ಸೆ ನೀಡಲಾಗ್ತಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಸೈಯದ್ ನಿಕತ್ ಫರ್ದೋಸ್ ಎಂಬಾಕೆ ಜೊತೆ ಸಲ್ಮಾನ್ ಪಾಷಾ ವಿವಾಹ ನಡೆದಿತ್ತು.
ಮದುವೆ ನಂತರ ಎರಡು ವರ್ಷ ಸುಖ ಸಂಸಾರವನ್ನೂ ನಡೆಸಿದ್ದರು. ಪತ್ನಿ ಎರಡನೇ ಮಗುವಿನ ಗರ್ಭಿಣಿಯಾದಾಗ ಸಲ್ಮಾನ್ ಗೆ ಕುವೈತ್ ನಲ್ಲಿ ಹೈಡ್ರಾಲಿಕ್ ಮೆಕಾನಿಕ್ ಆಗಿ ಕೆಲಸ ಸಿಕ್ಕಿದೆ. ಹೀಗಾಗಿ ಆತ ವಿದೇಶಕ್ಕೆ ತೆರಳಿದ ಬಳಿಕ ಸೈಯದ್ ನಿಕತ್ ಫರ್ದೋಸ್ ತಾಯಿ ಮನೆಗೆ ತೆರಳಿದ್ದಾರೆ. ಆ ಬಳಿಕ ಸಂಸಾರದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ.
AIMIM ಪಕ್ಷದ ತುಮಕೂರು ಜಿಲ್ಲಾಧ್ಯಕ್ಷನಾಗಿರುವ ಸೈಯದ್ ಬುರ್ಹಾನ್ ಉದ್ದೀನ್ ಜೊತೆ ಸೇರಿ ಪತ್ನಿ ಹೆಚ್ಚಿನ ಹಣಕ್ಕಾಗಿ ತನ್ನ ಪೀಡಿಸುತ್ತಿದ್ದಾಳೆ. ಜೊತೆಗೆ ಆಕೆಗೆ ಬುರ್ಹಾನ್ ಜೊತೆ ಅಕ್ರಮ ಸಂಬಂಧ ಇದ್ದು, ವಿದೇಶಿ ಕೆಲಸ ಬಿಟ್ಟು ತುಮಕೂರಿಗೆ ಬಂದರೂ ಇಬ್ಬರು ಮಕ್ಕಳನ್ನ ತೋರಿಸುತ್ತಿಲ್ಲ. ಹಣ ಕೊಡದಿದ್ದರೆ ವಿಚ್ಛೇದನ ನೀಡು ಎಂದು ಪತ್ನಿ ಹೇಳುತ್ತಿದ್ದು, ತುಮಕೂರು ಮಹಿಳಾ ಠಾಣೆ ಪೊಲೀಸರು ಸಹ ಹೆಂಡತಿ ಕುಟುಂಬಕ್ಕೆ ಬೆಂಬಲ ನೀಡುತ್ತಿದ್ದಾರೆ ಎನ್ನುವುದು ಸಲ್ಮಾನ್ ಪಾಷಾ ಆರೋಪವಾಗಿದೆ.
ಇನ್ನು ಗಂಡನ ಆರೋಪಗಳಿಗೆ ಪತ್ನಿ ಸೈಯದ್ ನಿಕತ್ ಫರ್ದೋಸ್ ಪ್ರತಿಕ್ರಿಯೆ ನೀಡಿದ್ದು, ಈ ಹಿಂದೆ ಸೋಪಿನ ನೀರು ಕುಡಿದು ಸಲ್ಮಾನ್ ಡ್ರಾಮಾ ಮಾಡಿದ್ದ. ನಾನು ಕೆಲಸ ಮಾಡುವ ಜಾಗಕ್ಕೆ ಬಂದು ಆ್ಯಸಿಡ್ ಹಾಕುತ್ತೇನೆಂದು ಬೆದರಿಕೆ ಹಾಕಿದ್ದ. ಈ ಬಗ್ಗೆ ನಾನು ದೂರು ಸಹ ಕೊಟ್ಟಿದ್ದೆ ಎಂದು ಮರು ಆರೋಪ ಮಾಡಿದ್ದಾರೆ.



