ಬೆಳಗಾವಿ: ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದು, ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಲಹೊಂಗಲ ತಾಲೂಕಿನ ತುರಕರಶೀಗಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಯಲ್ಲವ್ವ ಕಂಬಳಿ (46) ಕೊಲೆಯಾದ ಪತ್ನಿಯಾಗಿದ್ದು, ಶಿವಪ್ಪ ಸಣ್ಣಬಸಪ್ಪ ಕಂಬಳಿ (50) ಆತ್ಮಹತ್ಯೆ ಮಾಡಿಕೊಂಡ ಪತಿಯಾಗಿದ್ದಾರೆ.
ಯಲ್ಲವ್ವ ತವರು ಮನೆಗೆ ಹೋಗುವ ವಿಚಾರಕ್ಕೆ ಸಂಬಂಧಿಸಿ ಪತಿ ಶಿವಪ್ಪರೊಂದಿಗೆ ಪದೇಪದೇ ಜಗಳವಾಗುತ್ತಿತ್ತು ಎನ್ನಲಾಗಿದೆ. ಕಳೆದ ವಾರ ಯಲ್ಲವ್ವ ತಾಯಿ ನಿಧನರಾಗಿದ್ದರಿಂದ, ತವರು ಊರಾದ ಮೇಕಲಮರಡಿ ಗ್ರಾಮಕ್ಕೆ ಹೋಗಿದ್ದರು. ಮಂಗಳವಾರ ಮಾತ್ರವೇ ಅವರು ಗಂಡನ ಮನೆಗೆ ಮರಳಿದ್ದರು.
ತಾಯಿಯ ಸಾವಿನ ನಂತರದ ವಿಧಿವಿಧಾನಗಳನ್ನು ನೆರವೇರಿಸಲು ಶುಕ್ರವಾರ ಬೆಳಿಗ್ಗೆ ಸಿಹಿ ಅಡುಗೆ ಮಾಡಿಕೊಂಡು ಮೇಕಲಮರಡಿಗೆ ತೆರಳಲು ಯಲ್ಲವ್ವ ಸಿದ್ಧತೆ ನಡೆಸುತ್ತಿದ್ದ ವೇಳೆ, ಪತಿ ಶಿವಪ್ಪ ಮತ್ತೆ ಜಗಳ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದ ನಂತರ ಕೋಪೋದ್ರಿಕ್ತನಾದ ಶಿವಪ್ಪ ಕೊಡಲಿಯಿಂದ ಯಲ್ಲವ್ವ ಅವರ ಕುತ್ತಿಗೆಗೆ ಬಲವಾಗಿ ಹೊಡೆದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಯಲ್ಲವ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪತ್ನಿಯನ್ನು ಕೊಲೆಗೈದ ಬಳಿಕ ಶಿವಪ್ಪ ಕೂಡ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದು, ಒಬ್ಬ ಮಗ ನಿನ್ನೆ ಸಂಬಂಧಿಕರ ಊರಿಗೆ ತೆರಳಿದ್ದರೆ, ಮತ್ತೊಬ್ಬ ಮಗ ಬೆಳಿಗ್ಗೆ ಎಂದಿನಂತೆ ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ ಕಂಪನಿಗೆ ಕೆಲಸಕ್ಕೆ ಹೋಗಿದ್ದ. ಬೆಳಿಗ್ಗೆ ಸುಮಾರು 8.45ರಿಂದ 9 ಗಂಟೆ ನಡುವೆ ಮನೆಗೆ ತಂದೆ–ತಾಯಿ ಇಬ್ಬರೇ ಇದ್ದ ಸಮಯದಲ್ಲಿ ಈ ದುರ್ಘಟನೆ ನಡೆದಿದೆ.
ಅಪ್ಪ–ಅಮ್ಮ ಇಬ್ಬರೂ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಮಕ್ಕಳ ಆಕ್ರಂದನ ಹೃದಯ ವಿದ್ರಾವಕವಾಗಿತ್ತು. ಘಟನಾ ಸ್ಥಳಕ್ಕೆ ಕಿತ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.



