ತುಮಕೂರು: ತುಮಕೂರು ಹೊರವಲಯದ ಅಂತರಸನಹಳ್ಳಿಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಮೃತಳನ್ನು 20 ವರ್ಷದ ಗೀತಾ ಎನ್ನಲಾಗಿದ್ದು, ಆರೋಪಿ ಪತಿ ನವೀನ್ ಘಟನೆ ಬಳಿಕ ಪರಾರಿಯಾಗಿದ್ದಾನೆ. ಗೀತಾ ಮತ್ತು ನವೀನ್ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿ ಅಂತರಸನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರೆ, ನವೀನ್ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಅವರಿಗೆ ಒಂದು ವರ್ಷದ ಗಂಡು ಮಗು ಕೂಡಾ ಇದೆ. ಗೀತಾ ಮಗುವನ್ನು ಇತ್ತೀಚೆಗಷ್ಟೇ ತವರು ಮನೆಗೆ ಕಳುಹಿಸಿದ್ದರು.
ಜುಲೈ 5ರ ರಾತ್ರಿ ಗೀತಾ ಹಾಗೂ ನವೀನ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ನವೀನ್ ತನ್ನ ಪತ್ನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ, ಪರಾರಿಯಾಗಿದ್ದಾನೆ.
ಮನೆ ಮಾಲೀಕ ಬಾಡಿಗೆ ಪಡೆಯಲೆಂದು ಬೆಳಿಗ್ಗೆ ಮನೆ ಬಳಿ ಬಂದಿದ್ದರು. ಈ ವೇಳೆ ಗೀತಾ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡ ಮನೆ ಮಾಲೀಕ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.