ದಾವಣಗೆರೆ: ಜನರು ತಮ್ಮ ಮೇಲಿನ ಅಭಿಮಾನದಿಂದ ಮುಂದಿನ ಸಿಎಂ ಎಂದು ಘೋಷಣೆ ಕೂಗುತ್ತಾರೆ. ಆದರೆ ಅದು ಈ ಅವಧಿಗೆ ಸಂಬಂಧಪಟ್ಟದ್ದಲ್ಲ, ಮುಂದಿನ 2028ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ್ದು ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರು “ಮುಂದಿನ ಸಿಎಂ ಸತೀಶ್ ಜಾರಕಿಹೊಳಿ” ಎಂದು ಘೋಷಣೆ ಕೂಗುವುದು ನಮ್ಮ ಮೇಲಿನ ಅಭಿಮಾನದ ಪ್ರತಿಫಲ. ಆದರೆ ಈಗಲೇ ನಾನು ಸಿಎಂ ಆಗುತ್ತೇನೆ ಎಂದು ಹೇಳಿಲ್ಲ. ಈ ಅವಧಿಯಲ್ಲಿ ಯಾರು ಸಿಎಂ ಆಗುತ್ತಾರೆ ಎಂಬುದು ಪಕ್ಷದ ನಿರ್ಧಾರ. ನಾವು ಮುಂದಿನ ಚುನಾವಣೆಗೆ ಸಿಎಂ ಸ್ಥಾನದ ಆಕಾಂಕ್ಷಿಗಳು ಮಾತ್ರ ಎಂದು ಹೇಳಿದರು.
ಪ್ರಸ್ತುತ ಅಸ್ಸಾಂ ವಿಧಾನಸಭಾ ಚುನಾವಣೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗಳು ಎದುರಿವೆ. ಇಂತಹ ಸಂದರ್ಭದಲ್ಲಿ ಸಿಎಂ ಬದಲಾವಣೆ ಕುರಿತ ಚರ್ಚೆ ನಡೆಸುವುದು ಸೂಕ್ತವಲ್ಲ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಸಾಕಷ್ಟು ಜವಾಬ್ದಾರಿಗಳಿದ್ದು,
ಆ ಕಾರಣಕ್ಕಾಗಿ ಅವರು ದೆಹಲಿಗೆ ಆಗಾಗ ಭೇಟಿ ನೀಡುತ್ತಾರೆ ಎಂದು ತಿಳಿಸಿದರು.ಯಾವುದೇ ವಿಷಯದಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ವೇ ಆಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.



