ವಿಜಯಸಾಕ್ಷಿ ಸುದ್ದಿ, ಗದಗ: ಹಲವಾರು ದಶಕಗಳಿಂದ ಪಕ್ಷ ಸಂಘಟನೆಗಾಗಿ ಹಗಲಿರುಳು ದುಡಿದಿದ್ದೇನೆ. ಇದನ್ನೇ ಮಾನದಂಡವಾಗಿ ಪರಿಗಣಿಸಿ ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ವರಿಷ್ಠರು ನನ್ನ ಈವರೆಗಿನ ಪಕ್ಷ ಸಂಘಟನೆ ಹಾಗೂ ಹಿರಿತನ ಪರಿಗಣಿಸಿ ಟಿಕೆಟ್ ನೀಡುವ ವಿಶ್ವಾಸವಿದೆ ಎಂದು ಬಿಜೆಪಿ ಶಿಸ್ತು ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಹಿಂದೆ ಮೂರು ಬಾರಿ ಎಂಎಲ್‌ಸಿ ಟಿಕೆಟ್‌ನಿಂದ ವಂಚಿತನಾಗಿರುವೆ. ರಾಜ್ಯಸಭಾ ಸ್ಥಾನಕ್ಕೂ ಅವಕಾಶ ತಪ್ಪಿದೆ. ಆಗ ಪಕ್ಷ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧನಾಗಿದ್ದೆ. ಈ ಬಾರಿ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಪ್ರಬಲ ಆಕಾಂಕ್ಷಿಯಾಗಿದ್ದು, ಪಕ್ಷ ಟಿಕೆಟ್ ಕೊಟ್ಟರೆ ಆರಿಸಿ ಬರುವ ವಿಶ್ವಾಸವಿದೆ ಎಂದರು.
1989ರಿಂದಲೂ ಪಕ್ಷಕ್ಕಾಗಿ ದುಡಿಯುತ್ತ ಬಂದಿದ್ದೇನೆ. ಪಕ್ಷ ಕೊಟ್ಟಿರುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವೆ. ಮೂರು ಬಾರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷನಾಗಿದ್ದೆ. ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿಯಾಗಿದ್ದೆ. ಉತ್ತರ ಕನ್ನಡ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳ ಚುನಾವಣಾ ಪ್ರಭಾರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಎಲ್ಲ ಆಧಾರದ ಮೇಲೆ ಪಕ್ಷದ ವರಿಷ್ಠರ ಬಳಿ ಟಿಕೆಟ್ ಕೇಳಿರುವೆ ಎಂದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಉಪ ಲೋಕಾಯುಕ್ತರೇ ಶೇ. 63ರಷ್ಟು ಭ್ರಷ್ಟಾಚಾರ ಇದೆ ಎಂದು ಹೇಳಿದ್ದಾರೆ. ಜತೆಗೆ ಸಚಿವ ಕೃಷ್ಣಬೈರೇಗೌಡ ಅವರು ಹಲವು ಕಡೆಗಳಲ್ಲಿ ‘ರೇಟ್ ಬೋರ್ಡ್’ ಹಾಕಿಬಿಡಿ ಎಂದು ತರಾಟೆಗೆ ತೆಗೆದುಕೊಂಡಿರುವುದನ್ನು ನೋಡಿದರೆ ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬುದು ಗೊತ್ತಾಗುತ್ತದೆ ಎಂದು ಹರಿಹಾಯ್ದರು.
ಅತಿವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ಸಿಎಂ-ಡಿಸಿಎಂ ಕುರ್ಚಿ ಕಿತ್ತಾಟದಲ್ಲಿದ್ದಾರೆ. ಕೃಷಿ ಸಚಿವ ಯಾರೆಂಬುದೇ ರಾಜ್ಯದ ಜನತೆಗೆ ಗೊತ್ತಿಲ್ಲ. ಅವರು ಮಂಡ್ಯ ಜಿಲ್ಲೆಗಷ್ಟೇ ಸೀಮಿತಗೊಂಡಿದ್ದಾರೆ. ಇವರಿಗೆ ಬ್ರೇಕ್‌ಫಾಸ್ಟ್ ಮೀಟಿಂಗ್ ಮಾಡಲು ಸಮಯ ಇದೆ. ರೈತರ ಕಷ್ಟ ಕೇಳಲು ಸಮಯ ಇಲ್ಲ ಎಂದು ಕಿಡಿಕಾರಿದರು.
ಅಧಿಕಾರ ಹಸ್ತಾಂತರದ ಚರ್ಚೆ ಆಗಿದ್ದರೆ ರಾಜ್ಯದ ಹಿತದೃಷ್ಟಿಯಿಂದ ಕುರ್ಚಿ ಬಿಟ್ಟುಕೊಡಲಿ. ಈ ಮೂಲಕ ಗೊಂದಲ ಪರಿಹರಿಸಿ, ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಲಿ ಎಂದು ಆಗ್ರಹಿಸಿದರು.
ಬಾಕ್ಸ್
ಕೋವಿಡ್ ಕಾರಣದಿಂದಾಗಿ ಕಳೆದ ಬಾರಿ ಪದವೀಧರರ ಚುನಾವಣೆಗೆ ಕೇವಲ 70 ಸಾವಿರ ಮಂದಿ ಮಾತ್ರ ನೋಂದಣಿ ಮಾಡಿಸಿದ್ದರು. ಈ ಬಾರಿ, ಮತದಾರರ ಸಂಖ್ಯೆ 1.50 ಲಕ್ಷ ದಾಟುವ ನಿರೀಕ್ಷೆ ಇದೆ. ಗದಗ ಜಿಲ್ಲೆಯಲ್ಲಿ ಈವರೆಗೆ 15 ಸಾವಿರಕ್ಕೂ ಅಧಿಕ ಮಂದಿ ಪದವೀಧರರು ನೋಂದಣಿ ಮಾಡಿಸಿದ್ದು, ಇನ್ನೂ ಕಾಲಾವಕಾಶ ಇರುವುದರಿಂದ ಪದವೀಧರರು ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಲಿಂಗರಾಜ ಪಾಟೀಲ ಮನವಿ ಮಾಡಿದರು.


