ರಾಮನಗರ: ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳ ನಡುವೆ, ನಾನು ಯಾವುದೇ ಬಣಕ್ಕೆ ಸೇರಿದವನು ಅಲ್ಲ. ನಾನು ಕಾಂಗ್ರೆಸ್‌ನಲ್ಲಿ ಕೇವಲ “ಒಂದು ವರ್ಷದ ಮಗು” ಎಂದು ಶಾಸಕ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನಾಯಕತ್ವ ಬದಲಾವಣೆಯ ಬಗ್ಗೆ ನನಗೆ ಮಾಹಿತಿ ಇಲ್ಲ. ಕಾಂಗ್ರೆಸ್ ಶಾಸಕರು ದೆಹಲಿ ಹೋಗಿರುವ ವಿಚಾರ ಎಂಬುದೂ ನನಗೆ ತಿಳಿದಿಲ್ಲ. ನಾನು ಪಕ್ಷಕ್ಕೆ ಹೊಸಬ. ನಮ್ಮ ಶಾಸಕ ಬಾಲಕೃಷ್ಣ ಹಳೆಯವರು, ಹಾಗಾಗಿ ಅವರು ದೆಹಲಿಗೆ ಹೋಗಿರಬಹುದು” ಎಂದು ಹೇಳಿದರು.
ಮುಖ್ಯಮಂತ್ರಿತ್ವ ಬದಲಾವಣೆ ವಿಷಯವನ್ನು ಹೈಕಮಾಂಡ್‌ಗೆ ಬಿಟ್ಟಿದ್ದಾರೆ. ಭಾನುವಾರವೇ ನಮ್ಮ ರಾಷ್ಟ್ರೀಯ ಅಧ್ಯಕ್ಷ ಖರ್ಗೆ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇಂತಹ ಚರ್ಚೆಗಳಲ್ಲಿ ನನ್ನನ್ನು ಎಳೆದು ಸುದ್ದಿ ಮಾಡಬೇಡಿ. ನನ್ನ ಕೆಲಸಕ್ಕೆ ನನ್ನನ್ನು ಬಿಟ್ಟುಬಿಡಿ. ಪಕ್ಷದ ನಾಯಕರು ಅಭಿಪ್ರಾಯ ಕೇಳಿದ್ರೆ ಅದನ್ನು ನಾನು ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.


