ಬೆಂಗಳೂರು:- ಹೈಕಮಾಂಡ್ ಹೇಳಿದ್ರೆ ಸಚಿವ ಸ್ಥಾನ ಬಿಡಲು ರೆಡಿ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪಕ್ಷ ನನಗೆ ಮೂರು ಬಾರಿ ಸಚಿವ ಸ್ಥಾನ ನೀಡಿದೆ. ಹೈಕಮಾಂಡ್ ಹೇಳಿದರೆ ನಾನು ಸಚಿವ ಸ್ಥಾನ ಬಿಡಲು ರೆಡಿ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಅರ್ಹತೆಗೂ ಮೀರಿ ಅವಕಾಶ ಸಿಕ್ಕಿದೆ. ಪಕ್ಷ ನನ್ನನ್ನ ಗುರುತಿಸಿ ಸಾಕಷ್ಟು ಅವಕಾಶ ನೀಡಿದೆ. ಕ್ಷೇತ್ರ ಪುನರ್ವಿಂಗಡಣೆ ನಂತರ ಹೊಸ ಕ್ಷೇತ್ರದ ಅವಕಾಶ ನೀಡುವುದರಿಂದ ಇಲ್ಲಿಯವರೆಗೂ ಅವಕಾಶ ನೀಡಿದೆ. ಸಚಿವ ಸ್ಥಾನದಿಂದ ಕ್ಷೇತ್ರದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಅವಕಾಶದ ವಿಷಯದಲ್ಲಿ ನನಗೆ ಹೊಟ್ಟೆ ತುಂಬಿದೆ, ಆದ್ರೆ ಕೆಲಸದಲ್ಲಿ ಅಲ್ಲ. ಇನ್ನೂ ಮಾಡುವ ಕೆಲಸ ಬಾಕಿ ಇದೆ, ಅವಕಾಶದ ವಿಚಾರದಲ್ಲಿ ನಾನು ಸಂತೃಪ್ತನಾಗಿದ್ದೇನೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರೈಸಿದ ಬೆನ್ನಲ್ಲೆ ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ರಚನೆಯ ಸಂದರ್ಭದಲ್ಲೇ ಬೇರೆಯವರಿಗೂ ಅವಕಾಶ ನೀಡುವ ಬಗ್ಗೆ ಚರ್ಚೆಯಾಗಿತ್ತು. ಸಚಿವ ಸ್ಥಾನ ಸ್ವೀಕರಿಸುವುದಕ್ಕೂ ಮೊದಲೇ ಗಮನಕ್ಕೆ ತಂದು ಸಂಪುಟ ರಚಿಸಲಾಗಿತ್ತು. ಈ ಸರ್ಕಾರ ಬಂದಾಗಲೇ ಈ ನಿರ್ಧಾರ ಆಗಿತ್ತು. ಹೊರಗಡೆ ಇದ್ದವರಿಗೆ ಅವಕಾಶ ಕೊಡಬೇಕು ಎಂಬ ನಿರ್ಧಾರ ಆಗಿತ್ತು. ಸಂಪುಟಕ್ಕೆ ಅರ್ಹತೆ ಇರುವವರಿಗೆ ಅವಕಾಶ ಸಿಗಬೇಕು. ಆದರೆ, ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಚಿವ ಸಂಪುಟ ಪುನರ್ ರಚನೆಗೂ ನಾಯಕತ್ವ ಬದಲಾವಣೆಗೂ ಸಂಬಂಧವಿಲ್ಲ ಎಂದು ಹೇಳಿದರು.


