ಮೈಸೂರು: ನಾನು ಜೆಡಿಎಸ್‌ನಲ್ಲಿಯೇ ಇದ್ದೇನೆ, ಎಲ್ಲಿಯೂ ಹೋಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ನಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಟಿಕೆಟ್ ಬೇರೆಯವರಿಗೆ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಜೆಡಿಎಸ್ ಪಕ್ಷವನ್ನು ಕಟ್ಟಿದ ವಿಚಾರವನ್ನು ಹೆಚ್.ಡಿ. ದೇವೇಗೌಡ ಹಾಗೂ ಹೆಚ್.ಡಿ. ಕುಮಾರಸ್ವಾಮಿಗೆ ಚೆನ್ನಾಗಿ ಗೊತ್ತಿದೆ. ನಾನು ಮೂರು ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದಿದ್ದೇನೆ. ಮುಂದೆಯೂ ಜೆಡಿಎಸ್‌ನಲ್ಲಿಯೇ ಇರುತ್ತೇನೆ ಮತ್ತು ಜೆಡಿಎಸ್‌ನಿಂದಲೇ ಸ್ಪರ್ಧಿಸುತ್ತೇನೆ. ಇದರಲ್ಲಿ ಯಾರೂ ಆತಂಕಪಡುವ ಅಗತ್ಯವಿಲ್ಲ. ನನಗೂ ಆತಂಕವಿಲ್ಲ, ಕಾರ್ಯಕರ್ತರಿಗೂ ಇಲ್ಲ ಎಂದು ಹೇಳಿದರು.
ನಾನು ಎಲ್ಲಿಯೂ ಹೋಗುವುದಿಲ್ಲ. ನನ್ನ ಚಾಮುಂಡೇಶ್ವರಿ ಕ್ಷೇತ್ರ ದೊಡ್ಡ ಕ್ಷೇತ್ರವಾಗಿದ್ದು, ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗಾಗಿ ನಿರಂತರವಾಗಿ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿದ್ದೇನೆ. ಪಕ್ಷದ ಕೆಲವು ಕಾರ್ಯಗಳಿಂದ ನಾನು ಏಕೆ ದೂರವಾಗಿದ್ದೇನೆ, ನನಗೆ ಏಕೆ ನೋವಾಗಿದೆ ಎಂಬುದು ನಮ್ಮ ಪಕ್ಷದ ವರಿಷ್ಠರಿಗೆ ಗೊತ್ತಿದೆ. ಆದರೂ ನಾನು ಪಕ್ಷದಲ್ಲಿಯೇ ಇದ್ದೇನೆ. ಎಲ್ಲದಕ್ಕೂ ಕಾಲ ಬರುತ್ತದೆ, ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಜಿ.ಟಿ. ದೇವೇಗೌಡ ಹೇಳಿದರು.
ನಾನು ಯಾವುದೇ ನಾಯಕರಿಗೂ ದ್ರೋಹ ಮಾಡಿಲ್ಲ. ಐದು ಬಾರಿ ಶಾಸಕನಾಗಿದ್ದೇನೆ. ಇದರಲ್ಲಿ ಎರಡು ಬಾರಿ ಹುಣಸೂರು ಹಾಗೂ ಮೂರು ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದಿದ್ದೇನೆ. ಜೆಡಿಎಸ್ ಪಕ್ಷದ ಸಂಘಟನೆಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದೇನೆ. ಈಗಲೂ ಪಕ್ಷದಿಂದ ದೂರ ಉಳಿದಿಲ್ಲ. ಯಾರನ್ನೂ ಟೀಕಿಸಿಲ್ಲ, ಕ್ಷೇತ್ರದ ಕೆಲಸವನ್ನೇ ಮುಂದುವರಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.



