ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ವಿರುದ್ಧ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ದರ್ಶನ್ ಹಾಗೂ ಅವರ ಗ್ಯಾಂಗ್ ವಿರುದ್ಧ 3ರಿಂದ 4 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದರ್ಶನ್ ಮತ್ತು ಗ್ಯಾಂಗ್ ರೇಣುಕಾ ಸ್ವಾಮಿ ಅವರನ್ನು ಕರೆತಂದಾಗಿನಿಂದ ನಾಲ್ವರ ಸರೆಂಡರ್ ಆಗುವವರೆಗಿನ ವೃತ್ತಾಂತವನ್ನು ತೋರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವರದಿ ಆಗಿದೆ.
ಇನ್ನೂ ಚಾರ್ಜ್ ಶೀಟ್ ಸಲ್ಲಿಸಲು ಕೆಲವೇ ದಿನಗಳು ಬಾಕಿ ಇರುವ ಈ ಸಮಯದಲ್ಲಿ ಕೆಲವು ಕುತೂಹಲಕಾರಿ ವಿಷಯಗಳು ಹೊರಬಿದ್ದಿವೆ. ಅಂದಹಾಗೆ ಜೂನ್ 11 ರಂದು ಬೆಳ್ಳಂಬೆಳಿಗ್ಗೆ ನಟ ದರ್ಶನ್ ಬಂಧನವಾಗಿತ್ತು. ಮೈಸೂರಿನಲ್ಲಿ ದರ್ಶನ್ ಅನ್ನು ಪೊಲೀಸರು ಬಂಧಿಸಲು ಹೋದಾಗ ಪೊಲೀಸರ ಮುಂದೆ ದರ್ಶನ್, ‘ನನ್ನ ಜೊತೆಗಿದ್ದ ಹುಡುಗರಿಂದ ನಾನು ಹಾಳಾದೆ’ ಎಂದು ಹೇಳಿದರಂತೆ.
ಅದಾದ ಬಳಿಕ ನಟಿ ಪವಿತ್ರಾ ಗೌಡ ಅವರನ್ನು ಬಂಧಿಸಲು ಯತ್ನಿಸಿ ಅವರ ಮನೆ ಹಾಗೂ ಇನ್ನೊಂದು ಸ್ಥಳಕ್ಕೆ ಪೊಲೀಸರು ಹೋಗಿದ್ದಾರೆ ಆದರೆ ಎರಡೂ ಸ್ಥಳದಲ್ಲಿ ಪವಿತ್ರಾ ಇರಲಿಲ್ಲ. ಕೊನೆಗೆ ದರ್ಶನ್ ಮೊಬೈಲ್ ನಿಂದಲೇ ಪವಿತ್ರಾಗೆ ಕರೆ ಮಾಡಿಸಿದ ಪೊಲೀಸರು ಪವಿತ್ರಾರನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಕರೆಸಿಕೊಂಡು ಬಂಧಿಸಿದ್ದಾರೆ.