ಬೆಂಗಳೂರು: “ನಾನು ಯಾವುದೇ ತಪ್ಪು ಮಾಡಿಲ್ಲ. ಯಾರ ಮನಸ್ಸನ್ನು ನೋಯಿಸುವ ಉದ್ದೇಶ ನನ್ನದಲ್ಲ. ಆದರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಇಂಡಿಯಾ ಮೈತ್ರಿ ಕೂಟದ ನಾಯಕರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು. ವಿಧಾನಸಭೆಯಲ್ಲಿ ಆರ್ ಎಸ್ಎಸ್ ಗೀತೆಯ ಸಾಲುಗಳನ್ನು ಉಲ್ಲೇಖಿಸಿದ್ದರ ಬಗ್ಗೆ ಸ್ಪಷ್ಟನೆ ನೀಡಿದರು. ಜೊತೆಗೆ ತಮ್ಮ ಹೇಳಿಕೆಯನ್ನು ರಾಜಕೀಯವಾಗಿ ಬಳಸುತ್ತಿರುವವರಿಗೂ ತಿರುಗೇಟು ನೀಡಿದರು.
ನಾನು ಆರ್ ಎಸ್ ಎಸ್ ಹೊಗಳಿಲ್ಲ, ಎದುರಾಳಿಗಳ ಬಗ್ಗೆ ತಿಳಿಯುವುದು ನನ್ನ ಕರ್ತವ್ಯ:
“ನಾನು ಕೆಲವು ದಿನಗಳ ಹಿಂದೆ ಸದನದಲ್ಲಿ ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ಚರ್ಚೆ ವೇಳೆ ನಮ್ಮ ನಾಯಕರಾದ ಪರಮೇಶ್ವರ್ ಅವರನ್ನು ಸಮರ್ಥಿಸಿಕೊಳ್ಳುತ್ತಾ, ನಾನು ಅವರ ಗರಡಿಯಲ್ಲಿ ಬೆಳೆದಿದ್ದೇನೆ ಎಂದು ಹೇಳಿದೆ. ಕೆಣಕಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಕಾಲೆಳೆಯಲು ಅವರು ಬೆಳೆದು ಬಂದಿರುವ ಹಿನ್ನೆಲೆಯೂ ನನಗೆ ಗೊತ್ತಿದೆ ಎಂದು ಆರ್ ಎಸ್ಎಸ್ ಗೀತೆಯ ಎರಡು ಸಾಲು ಹೇಳಿದೆ. ಆರ್ ಎಸ್ಎಸ್ ಹೊಗಳುವುದು ನನ್ನ ಉದ್ದೇಶವಾಗಿರಲಿಲ್ಲ. ಆದರೆ ನಿರ್ದಿಷ್ಟ ಭಾಗವನ್ನು ಮಾತ್ರ ಕಟ್ ಅಂಡ್ ಪೇಸ್ಟ್ ಮಾಡಿ, ಬೇರೆ ವಿಚಾರಗಳ ಜೊತೆ ಬೆರೆಸಿ ರಾಷ್ಟ್ರ ಮಟ್ಟದ ಸುದ್ದಿ ಮಾಡಲಾಗಿದೆ” ಎಂದು ಹೇಳಿದರು.
“1979 ರಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ವಿದ್ಯಾರ್ಥಿ ನಾಯಕನಾಗಿ ಕೆಲಸ ಮಾಡಿಕೊಂಡು ಬಂದವನು. ನಾನು ಹೊಸದಾಗಿ ಪಕ್ಷ ಸೇರಿದವನಲ್ಲ. ಯಾರಿಂದಲೂ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆಯೂ ಇಲ್ಲ. ಇಂದಿರಾ ಗಾಂಧಿ ಅವರು ನಿಧನ ಹೊಂದಿದ ಸಂದರ್ಭದಲ್ಲಿ ನನ್ನ ಟೂರಿಂಗ್ ಟಾಕೀಸ್ ಗೆ ಇಂದಿರಾ ಚಿತ್ರಮಂದಿರ ಎಂದು ಹೆಸರಿಟ್ಟವನು ನಾನು. ನನ್ನ ಹಾಗೂ ಗಾಂಧಿ ಕುಟುಂಬದ ನಡುವಿನ ಸಂಬಂಧ ಭಕ್ತ ಹಾಗೂ ಭಗವಂತನ ನಡುವಣ ಸಂಬಂಧ” ಎಂದರು.
“ರಾಜಕೀಯ ನಾಯಕನಾಗಿ ಹಾಗೂ ರಾಜಕೀಯ ಶಾಸ್ತ್ರದ ವಿದ್ಯಾರ್ಥಿಯಾಗಿ, ಎನ್ಎಸ್ ಯುಐನಲ್ಲಿ ವಿದ್ಯಾರ್ಥಿ ನಾಯಕನಾಗಿ ಬೆಳೆದವನು ನಾನು. ಗಾಂಧಿ ಕುಟುಂಬ ಹಾಗೂ ಅದರ ಕೊಡುಗೆ ಸೇರಿದಂತೆ, ಕಾಂಗ್ರೆಸ್ ಪಕ್ಷದ ಇತಿಹಾಸ, ಆರ್ ಎಸ್ಎಸ್ ಇತಿಹಾಸ, ಬಿಜೆಪಿ ಇತಿಹಾಸ, ಜೆಡಿಎಸ್, ಕಮ್ಯುನಿಷ್ಟ್ ಪಕ್ಷಗಳ ಇತಿಹಾಸ, ಅಜೆಂಡಾ ತಿಳಿದಿದ್ದೇನೆ. ಇದು ನನ್ನ ಕರ್ತವ್ಯ. ಕೇರಳದಲ್ಲಿ ನಮ್ಮ ಮೈತ್ರಿ ಪಕ್ಷ ಮುಸ್ಲಿಂ ಲೀಗ್ ಯೂಥ್ ಕಾನ್ಫರೆನ್ಸ್ ಗೆ ಕೆಲ ವರ್ಷಗಳ ಹಿಂದೆ ಹೋಗಿದ್ದೆ. ಆಗ ಅವರ ಶಿಸ್ತು, ಸಂಘಟನೆ ನೋಡಿ ನಾನು ಬೆರಗಾಗಿದ್ದೆ” ಎಂದು ಹೇಳಿದರು.
“ನಮ್ಮ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಹಾಗೂ ಅಧಿಕಾರಕ್ಕೆ ಬಂದ ನಂತರ ಆರ್ ಎಸ್ಎಸ್ ಹೇಗೆ ಬೇರೂರಿದೆ ಎಂದು ಅರಿತಿದ್ದೇನೆ. ರಿಸರ್ವ ಬ್ಯಾಂಕ್ ಕಚೇರಿ ಎದುರು ಆರ್ ಎಸ್ಎಸ್ ನ ದೊಡ್ಡ ಕಟ್ಟಡವಿದೆ. ವರ್ಷಕ್ಕೆ ಕೋಟ್ಯಂತರ ರೂ. ಬಾಡಿಗೆ ಪಡೆಯುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಎಷ್ಟು ಶಾಲೆ ಆರಂಭಿಸಿದ್ದಾರೆ. ಚನ್ನೇನಹಳ್ಳಿಯಲ್ಲಿ ಯಾವ ರೀತಿ ಭವ್ಯ ಕಟ್ಟಡ ನಿರ್ಮಿಸುತ್ತಿದ್ದಾರೆ, ರಾಜ್ಯದಲ್ಲಿ ಹೇಗೆ ಸಂಘಟನೆ ಮಾಡುತ್ತಿದ್ದಾರೆ ಎಂಬುದನ್ನು ರಾಜಕೀಯ ನಾಯಕನಾಗಿ ಅರಿತಿದ್ದೇನೆ. ಪಕ್ಷದ ಅಧ್ಯಕ್ಷನಾಗಿ ನಮ್ಮ ವಿರೋಧಿಗಳ ಸಂಘಟನೆ ಬಗ್ಗೆ ತಿಳಿಯುವುದು ನಮ್ಮ ಕರ್ತವ್ಯ” ಎಂದು ತಿಳಿಸಿದರು.