ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯನ್ನು ಪ್ರತಿಯೊಬ್ಬರು ಖಂಡಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಈ ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಖಾನ್, ಶಾರುಖ್ ಖಾನ್, ಅಕ್ಷಯ್ ಕುಮಾರ್, ರಶ್ಮಿಕಾ ಮಂದಣ್ಣ, ಕಿಯಾರಾ ಅಡ್ವಾಣಿ ಸೇರಿದಂತೆ ಹಲವು ಕಲಾವಿದರು ಪ್ರತಿಕ್ರಿಯಿಸಿದ್ದು ಇದೀಗ ಖ್ಯಾತ ಸಂಗೀತ ನಿರ್ದೇಶಕ ಸಲೀಂ ಮರ್ಚೆಂಟ್ ಅವರು ಕೂಡ ಉಗ್ರರ ದಾಳಿಯನ್ನು ಖಂಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಸಲೀಂ ಮರ್ಚೆಂಟ್, ‘ಹಿಂದೂಗಳು ಎಂಬ ಕಾರಣಕ್ಕೆ ಪಹಲ್ಗಾಮ್ನಲ್ಲಿ ಅಮಾಯಕರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗಿದೆ. ಹಂತಕರು ಮುಸ್ಲಿಮರೇ? ಅಲ್ಲ, ಅವರು ಭಯೋತ್ಪಾದಕರು. ಯಾಕೆಂದರೆ ಇಸ್ಲಾಂ ಇದನ್ನು ಹೇಳಿಕೊಡುವುದಿಲ್ಲ. ಧರ್ಮದ ವಿಚಾರದಲ್ಲಿ ಯಾವುದೇ ಬಲವಂತ ಮಾಡುವಂತಿಲ್ಲ ಎಂದು ಖುರಾನ್ನಲ್ಲಿ ಬರೆದಿದೆ’ ಎಂದು ವಿಡಿಯೋ ಆರಂಭಿಸಿದ್ದಾರೆ.
‘ಇಂಥ ಒಂದು ದಿನವನ್ನು ನೋಡುವಂತಾಯಿತಲ್ಲ ಎಂದು ಮುಸ್ಲಿಮನಾಗಿ ನನಗೆ ನಾಚಿಕೆ ಆಗುತ್ತಿದೆ. ನನ್ನ ಅಮಾಯಕ ಹಿಂದೂ ಸಹೋದರ, ಸಹೋದರಿಯರನ್ನು ಹತ್ಯೆ ಮಾಡಲಾಗಿದೆ. ಈ ದ್ವೇಷ ಯಾವಾಗ ಮುಗಿಯುತ್ತದೆ? ಕಳೆದ 2-3 ವರ್ಷಗಳಿಂದ ಕಾಶ್ಮೀರದ ಜನರು ಸರಿಯಾಗಿ ಜೀವನ ಮಾಡುತ್ತಿದ್ದರು. ಅವರ ಜೀವನದಲ್ಲಿ ಮತ್ತೆ ಅದೇ ಸಮಸ್ಯೆ ಶುರುವಾಗಿದೆ’ ಎಂದು ಸಲೀಂ ಮರ್ಚೆಂಟ್ ಅವರು ಹೇಳಿದ್ದಾರೆ.
‘ನನ್ನ ನೋವು ಮತ್ತು ಕೋಪವನ್ನು ಹೇಗೆ ವ್ಯಕ್ತಪಡಿಸಲಿ ಎಂಬುದೇ ತಿಳಿಯುತ್ತಿಲ್ಲ. ಅಮಾಯಕ ಜನರು ಪ್ರಾಣ ತೆತ್ತಿದ್ದಾರೆ. ತಲೆ ಬಾಗಿ ನಾನು ಪ್ರಾರ್ಥನೆ ಮಾಡುತ್ತೇನೆ. ಅವರ ಕುಟುಂಬದವರಿಗೆ ದೇವರು ಶಕ್ತಿ ನೀಡಲಿ. ಓಂ ಶಾಂತಿ’ ಎಂದು ಸಲೀಂ ಮರ್ಚೆಂಟ್ ವಿಡಿಯೋ ಮುಗಿಸಿದ್ದಾರೆ.