ಹಾಸನ: ಜಿಲ್ಲೆಯ ರಾಜಕೀಯ ಮತ್ತೆ ಕುದಿಯತೊಡಗಿದೆ. ಅರಸೀಕೆರೆಯಿಂದ ಸ್ಪರ್ಧೆ ಮಾಡುವಂತೆ ಶಾಸಕ ಶಿವಲಿಂಗೇಗೌಡ ನೀಡಿದ ಪಂಥಾಹ್ವಾನಕ್ಕೆ ಮಾಜಿ ಸಚಿವ ಹೆಚ್‌ಡಿ ರೇವಣ್ಣ ಭಾರೀ ಪ್ರತಿಕ್ರಿಯೆ ನೀಡಿದ್ದು, ವೇದಿಕೆಯಲ್ಲೇ ಸ್ಫೋಟಕ ವಾಗ್ದಾಳಿ ನಡೆಸಿದ್ದಾರೆ.
ಆಲೂರು ತಾಲ್ಲೂಕಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರೇವಣ್ಣ,
“ಈ ಗಿರಾಕಿ ಎಲ್ಲಿದ್ದ? ಇಷ್ಟು ಮಾತನಾಡ್ತಾನಾ? ಅವನಿಗೆ ತಾಕತ್ ಇದ್ಯಾ?” ಎಂದು ನೇರವಾಗಿ ಪ್ರಶ್ನೆ ಎಸೆದಿದ್ದಾರೆ.
“ಆ ಸಮಾಜದ ಹೆಸರಿನಲ್ಲಿ ಇಪ್ಪತ್ತು ವರ್ಷ ರಾಜಕೀಯ ಮಾಡಿಕೊಂಡಿದ್ದಾನೆ. ಅರಸೀಕೆರೆಯಲ್ಲಿ ಏನು ನಡೆಯುತ್ತಿದೆ ಅನ್ನೋದನ್ನ ನಾನು ಚೆನ್ನಾಗಿ ಗೊತ್ತಿದೆ. ಇದು ಇಲ್ಲಿಗೆ ಮುಗಿಯುವುದಿಲ್ಲ” ಎಂದು ಎಚ್ಚರಿಕೆ ಶೈಲಿಯಲ್ಲಿ ಹೇಳಿದ್ದಾರೆ.
“ನಾನು ಸವಾಲು ಸ್ವೀಕರಿಸುತ್ತೇನೆ. ಆದರೆ ನಿರ್ಧಾರ ಹೈಕಮಾಂಡ್ ಕೈಯಲ್ಲಿದೆ. ಅವನು ಈ ಮಟ್ಟಕ್ಕೆ ಬರಲು ನಾವು ಏನೇನು ಮಾಡಿದ್ದೇವೆ ಎಂಬುದು ನನಗೆ ಸ್ಪಷ್ಟವಾಗಿದೆ” ಎಂದು ತಮ್ಮ ಕೊಡುಗೆಗಳನ್ನು ನೆನಪಿಸಿದರು.
ಹಿಂದಿನ ರಾಜಕೀಯ ಹಿನ್ನೆಲೆಯ ಬಗ್ಗೆ ಮಾತನಾಡಿದ ರೇವಣ್ಣ, “ನಮ್ಮ ಸಮಾಜ ಒಕ್ಕಲಿಗರಿಗೆ ಟಿಕೆಟ್ ನೀಡಿ ಎಂದಿತ್ತು. ಆದರೂ ನಾನು ಕುರುಬ ಸಮುದಾಯದ ಬಿಳಿ ಚೌಡಯ್ಯರನ್ನು ಜಿಪಂ ಉಪಾಧ್ಯಕ್ಷನನ್ನಾಗಿ ಮಾಡಿದೆ. ನಾಲ್ಕು ಬಾರಿ ಗೆಲ್ಲಿಸಿದವರು ಯಾರು?” ಎಂದು ಪ್ರಶ್ನಿಸಿದರು.
“ಚುನಾವಣೆಯಲ್ಲಿ ಸೋತ ದಿನ ಅವನನ್ನು ನಮ್ಮ ಮನೆಗೆ ಕರೆದುಕೊಂಡು ಹೋಗಿ ಊಟ ಹಾಕಿದೆ. ನನ್ನ ತಂದೆ ಲಿಂಗಾಯಿತರಿಗೆ ಕ್ಷೇತ್ರ ಕೊಡಬೇಕು ಎಂದಿದ್ದರು. ಆದರೆ ಅವರ ಮಾತು ಮೀರಿ ಎಲ್ಲೋ ಇದ್ದ ಈ ಕೊಚ್ಚೆಗೆ ಸೀಟ್ ಕೊಟ್ಟೆ” ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ತಾನು ಮತ್ತು ಕುಮಾರಸ್ವಾಮಿ ಸಹಿ ಹಾಕಿದ ವಿಚಾರ ಉಲ್ಲೇಖಿಸಿ, “ನಮ್ಮ ಸಮಾಜದವರೇ ಪ್ರಶ್ನೆ ಮಾಡಿದರೂ ನಾವು ಸಹಿ ಹಾಕಿದೆವು” ಎಂದರು.
ಹಾಸನ ಕ್ಷೇತ್ರದ ರಾಜಕೀಯದ ಬಗ್ಗೆ ಮಾತನಾಡುತ್ತಾ, “ಐವತ್ತು ಸಾವಿರ ಮತಗಳ ಅಂತರದಲ್ಲಿ ನಾನು ಗೆಲ್ಲುತ್ತೇನೆ ಎಂದರು. ಆಗ ನನ್ನ ಪತ್ನಿಯನ್ನು ಪ್ರಚಾರಕ್ಕೆ ಕಳುಹಿಸಿದೆ. ಸಾಮಾನ್ಯ ಕಾರ್ಯಕರ್ತ ಸ್ವರೂಪ್‌ಪ್ರಕಾಶ್ ಅವರನ್ನು ನಿಲ್ಲಿಸಿದೆ” ಎಂದು ಹೇಳುವ ಮೂಲಕ ಪ್ರೀತಂ ಗೌಡ ವಿರುದ್ಧವೂ ಪರೋಕ್ಷ ವಾಗ್ದಾಳಿ ನಡೆಸಿದರು.



