ಬೆಂಗಳೂರು :- ರಾಷ್ಟ್ರ ರಾಜಧಾನಿ ದೆಹಲಿಗೂ ಕರ್ನಾಟಕದ ನಂದಿನಿ ಬ್ರಾಂಡ್ ಲಗ್ಗೆ ಇಟ್ಟಿದೆ. ಕರ್ನಾಟಕ ಹಾಲು ಒಕ್ಕೂಟ ಮಹಾಮಂಡಳ ಉತ್ಪಾದಿಸುವ ನಂದಿನಿ ಹಾಲನ್ನು ದೆಹಲಿಗೂ ಸರಬರಾಜು ಮಾಡುವಂತೆ ಬೇಡಿಕೆ ಬಂದಿದೆ.
ಹೌದು.. ನಂದಿನಿ ಹಾಲನ್ನು ರಾಷ್ಟ್ರ ರಾಜಧಾನಿ ದೆಹಲಿಗೂ ಕಳುಹಿಸುವಂತೆ ದೆಹಲಿ ಸರ್ಕಾರ ಮನವಿ ಮಾಡಿದೆ. ಪ್ರತಿನಿತ್ಯ ದೆಹಲಿಗೆ 1 ಲಕ್ಷ ಲೀಟರ್ ಹಾಲನ್ನು ಸರಬರಾಜು ಮಾಡುವಂತೆ ದೆಹಲಿ ಸರ್ಕಾರದಿಂದ ಮನವಿ ಮಾಡಲಾಗಿದೆ.
ದೇಶದ ಮೆಟ್ರೋ ಪಾಲಿಟಿನ್ ಸಿಟಿಯಾಗಿರುವ ದೆಹಲಿ ಕೇಂದ್ರಾಡಳಿತ ಪ್ರದೇಶ ಆಗಿದ್ದರೂ ಪ್ರತ್ಯೇಕ ಸರ್ಕಾರದ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಇನ್ನು ದೆಹಲಿಗೆ ಹತ್ತಿರದಲ್ಲಿರುವ ಗುಜರಾತ್ ರಾಜ್ಯದ ಅಮುಲ್ ಹಾಲು, ಮದರ್ ಡೈರಿಯ ಹಾಲನ್ನು ದೆಹಲಿಗೆ ಸರಬರಾಜು ಮಾಡಲಾಗುತ್ತಿದೆ. ಈಗ ದೆಹಲಿ ಸರ್ಕಾರದಿಂದಲೂ ಕೆಎಂಎಪ್ನ ನಂದಿನಿ ಹಾಲಿಗೆ ಡಿಮ್ಯಾಂಡ್ ಬಂದಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಮುಲ್ ಹಾಗೂ ಮದರ್ ಡೈರಿ ಹಾಲನ್ನು ಹಿಂದಿಕ್ಕಿ ತನ್ನದೇ ದಾಖಲೆ ಬರೆಯಲು ಕರ್ನಾಟಕದ ನಂದಿನಿ ಹಾಲು ಸಿದ್ಧಗೊಂಡಿದೆ. ಮುಂದಿನ ತಿಂಗಳು ಅಕ್ಟೋಬರ್ನಿಂದ ದೆಹಲಿಯಲ್ಲಿ ಹಾಲು ಹಾಗೂ ಮೊಸರು ಮಾರಾಟಕ್ಕೆ ಸಜ್ಜಾಗಿರುವ ಕೆಎಂಎಫ್, ಈ ಮೂಲಕ ನಂದಿನಿ ಬ್ರ್ಯಾಂಡ್ ಅನ್ನ ರಾಷ್ಟ್ರಮಟ್ಟದಲ್ಲೂ ಮಿಂಚಲಿದೆ ಎನ್ನಲಾಗಿದೆ.