ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಯಾರ ಹೆಸರನ್ನೂ ನಾನು ಶಿಫಾರಸು ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ 70ನೇ ಕರ್ನಾಟಕ ರಾಜ್ಯೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮ. ನಾನು ಯಾವುದೇ ಹಸ್ತಕ್ಷೇಪ ಮಾಡಿಲ್ಲ” ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ಈ ಸಮಾರಂಭದಲ್ಲಿ 70 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. “ಕರ್ನಾಟಕ ಉದಯವಾಗಿ 70 ವರ್ಷಗಳಾದ ಹಿನ್ನೆಲೆಯಲ್ಲಿ 70 ಸಾಧಕರನ್ನು ಗೌರವಿಸಲು ನಿರ್ಧರಿಸಿದ್ದೇವೆ” ಎಂದರು ಸಿಎಂ.
“ಅರ್ಜಿ ಹಾಕಿದವರಿಗಿಂತ ಕ್ಷೇತ್ರದ ಪರಿಣಿತರ ಸಾಧನೆ ಆಧಾರವಾಗಿಯೇ ಪ್ರಶಸ್ತಿ ಆಯ್ಕೆ ಮಾಡಲಾಗಿದೆ. ಒಂದೇ ವಿಭಾಗದಲ್ಲಿ ಹಲವರ ಹೆಸರು ಇದ್ದಾಗ ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಒಬ್ಬರ ಹೆಸರನ್ನು ಅಂತಿಮಗೊಳಿಸಲಾಗಿದೆ” ಎಂದು ಅವರು ವಿವರಿಸಿದರು.
ಮಾಧ್ಯಮಗಳು ಆಯ್ಕೆಯ ಬಗ್ಗೆ ಯಾವುದೇ ತಕರಾರು ಮಾಡದಿರುವುದನ್ನು ಮೆಚ್ಚಿ, “ಅರ್ಹರಿಗೆ ಪ್ರಶಸ್ತಿ ಸಿಕ್ಕಿದೆ ಎಂಬುದರಲ್ಲಿ ನನಗೆ ಸಂತೋಷ” ಎಂದು ಹೇಳಿದರು.
ಅಂತೆಯೇ, ಪ್ರಶಸ್ತಿ ಪುರಸ್ಕೃತ ಕೋಣಂದೂರು ಲಿಂಗಪ್ಪ ಅವರ ಸಮಾಜವಾದಿ ಹೋರಾಟದ ದಿನಗಳನ್ನು ಸ್ಮರಿಸಿ ಗೌರವ ಸಲ್ಲಿಸಿದರು.


