ಬೆಂಗಳೂರು: “ಚನ್ನಪಟ್ಟಣ ಹಾಗೂ ಕನಕಪುರದಿಂದ ರೌಡಿಗಳನ್ನು ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನಾನು ಇವತ್ತು ಜೀವಂತವಾಗಿದ್ದೇನೆ ಎಂದರೆ ಅದಕ್ಕೆ ಪೊಲೀಸರು ಕಾರಣ ಎಂದು ಆರ್‌ಆರ್‌ನಗರದ ಬಿಜೆಪಿ ಶಾಸಕ ಮುನಿರತ್ನ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಜೆಪಿ ಪಾರ್ಕ್‌ನಲ್ಲಿ ನಡೆದ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುನಿರತ್ನ, ಚುನಾವಣೆಯಲ್ಲಿ ಅವರ ತಮ್ಮ ಸೋತಾಗಿನಿಂದ ನಾನು ಟಾರ್ಗೆಟ್ ಆಗಿದ್ದೇನೆ. ರೌಡಿಶೀಟರ್‌ಗಳನ್ನು ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದರು.
ನನಗೆ ಆಹ್ವಾನ ಬಂದಿಲ್ಲ ಎಂದು ಮೂರು ದಿನ ಹಿಂದೆ ನಾನು ಸುದ್ದಿಗೋಷ್ಠಿ ಮಾಡಿ ಹೇಳಿದ್ದೇನೆ. ಸುದ್ದಿಗೋಷ್ಠಿ ಬಳಿಕವಾದರೂ ಸಂಸದರಿಗೆ, ಶಾಸಕರಿಗೆ ಆಹ್ವಾನ ಮಾಡಬೇಕಿತ್ತು. ಆಹ್ವಾನ ನೀಡದ್ದಕ್ಕೆ ನಾನು ಪ್ರಶ್ನೆ ಮಾಡಿದ್ದೇನೆ. ಸರ್ಕಾರಿ ಕಾರ್ಯಕ್ರಮ ಆಗಿರುವ ಕಾರಣ ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕ, ಸಂಸದರ ಫೋಟೋ ಹಾಕಬೇಕು. ಆದರೆ ಎಲ್ಲಿಯೂ ಫೋಟೋ ಹಾಕಿಲ್ಲ. ಇದು ಕಾಂಗ್ರೆಸ್ ಕಾರ್ಯಕ್ರಮವೇ ಅಥವಾ ಸರ್ಕಾರಿ ಕಾರ್ಯಕ್ರಮವೇ? ಇದನ್ನು ಪ್ರಶ್ನೆ ಮಾಡಿದರೆ ನನ್ನ ಮೇಲೆ ಹಲ್ಲೆ ಮಾಡುತ್ತಾರೆ ಎಂದರು.
ನನ್ನ ಮೇಲೆ ಮತ್ತಷ್ಟು ಕೇಸ್ ಹಾಕಲಿಕ್ಕೆ ತಯಾರಿ ಮಾಡುತ್ತಿದ್ದಾರೆ. ರೇಪ್ ಕೇಸ್ ಆಯ್ತು ದಲಿತನಿಂದನೆ ಆಯ್ತು ಈಗ ಪೋಕ್ಸೋ ಕೇಸ್ ಹಾಕಲಿಕ್ಕೆ ರೆಡಿ ಮಾಡುತ್ತಿದ್ದಾರೆ. ನನ್ನ ರಾಜೀನಾಮೆ ಕೊಡಿಸುವುದು ಅವರ ಉದ್ದೇಶ. ಬೆಳಗ್ಗೆಯಿಂದ ಅವರ ಪಕ್ಕ ಇರುವವರನ್ನು ಶಾಸಕರನ್ನಾಗಿ ಮಾಡಲು ಅವರು ಬಹಳ ಪ್ರಯತ್ನ ನಡೆಸುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೆ ರಾಜೀನಾಮೆ ನೀಡುವುದಿಲ್ಲ. ನಾನು ಸತ್ತರೂ ಇಲ್ಲೇ ಸಾಯುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.