ವಿಜಯಸಾಕ್ಷಿ ಸುದ್ದಿ, ಹಾವೇರಿ : ಹಾವೇರಿಯಲ್ಲಿ ವ್ಯಾಪಾರ-ವಹಿವಾಟು ಹೆಚ್ಚಾಗಲು ಬಣಜಿಗ ಸಮಾಜದ ಕೊಡುಗೆ ದೊಡ್ಡದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಶನಿವಾರ ಹಾವೇರಿ ಜಿಲ್ಲಾ ಬಣಜಿಗರ ಸಂಘದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು ಶಿಗ್ಗಾವಿ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು. ಅವರು ಇಲ್ಲದಿದ್ದರೆ ಅಖಂಡ ಕರ್ನಾಟಕ ಆಗುತ್ತಿರಲಿಲ್ಲ. ಅವರು ಆಯ್ಕೆಯಾದ ಕ್ಷೇತ್ರದಿಂದ ಜನರು ನನ್ನನ್ನು ಆಯ್ಕೆ ಮಾಡಿ ಕಳುಹಿಸಿರುವುದು ನನ್ನ ಪುಣ್ಯ ಎಂದರು.
ಬಣಜಿಗ ಸಮಾಜ ರಾಜಕೀಯವಾಗಿ ಜಾಗೃತವಾಗಿರುವ ಸಮಾಜ. ತಾವು ವ್ಯಾಪಾರ ಮಾಡುವುದರಿಂದ ತಮಗೆ ವ್ಯಾಪಾರಾಸ್ಥರು, ಗ್ರಾಹಕರು, ಏಜೆಂಟರು, ಎಲ್ಲರೂ ಬರುತ್ತಾರೆ. ನಿಮಗೆ ಹೆಚ್ಚಿನ ರಾಜಕೀಯ ಜ್ಞಾನ ಇರುತ್ತದೆ ಎಂದರು.
ಬಣಜಿಗ ಸಮಾಜದೊಂದಿಗೆ ಅವಿನಾಭಾವ ಸಂಬಂಧ ಇದ್ದು, ನಮ್ಮ ತಂದೆಯ ಎಲ್ಲ ವ್ಯವಹಾರಗಳನ್ನು ಎಸ್.ಐ. ಶೆಟ್ಟರ್ ಅವರು ನೋಡಿಕೊಳ್ಳುತ್ತಿದ್ದರು. ಮಾಜಿ ಸಚಿವರಾದ ದಿ. ಸಿ.ಎಂ. ಉದಾಸಿಯವರು ನನಗೆ ರಾಜಕೀಯ ಪಾಠ ಕಲಿಸಿದ್ದಾರೆ. ನಾನು ಶಿಗ್ಗಾವಿಗೆ ಬರುವ ಮುಂಚೆ ರಾಜಶೇಖರ ಸಿಂಧೂರಿಯವರು ಕ್ಷೇತ್ರದ ತ್ಯಾಗ ಮಾಡಿದ್ದರಿಂದ ನನಗೆ ಅವಕಾಶ ದೊರೆಯುವಂತಾಯಿತು. ನನ್ನ ಉಸಿರಿರುವವರೆಗೂ ಬಣಜಿಗ ಸಮಾಜದೊಂದಿಗೆ ಇರುತ್ತೇನೆ ಎಂದು ಹೇಳಿದರು.
ಹಾವೇರಿ ಪ್ರತ್ಯೇಕ ಜಿಲ್ಲೆಯಾಗಬೇಕಾದರೆ ಮಾಜಿ ಸಚಿವ ದಿ. ಸಿ.ಎಂ. ಉದಾಸಿ ಅವರೇ ಕಾರಣ. ಈ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಸಿ.ಎಂ. ಉದಾಸಿ ಪುತ್ಥಳಿ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸದ ಶಿವಕುಮಾರ್ ಉದಾಸಿ, ಹಾವೇರಿ ಜಿಲ್ಲಾ ಬಣಜಿಗ ಸಂಘದ ಅಧ್ಯಕ್ಷ ಬಸಣ್ಣ ಹೆಸರೂರು, ಸಿದ್ದಲಿಂಗಪ್ಪ ಮಹಾರಾಜಪೇಟಿ, ಬಾಬಣ್ಣ ಹಂಚಿನ, ಬಾಬಣ್ಣ ಐರೇಣಿ, ವಿರೇಶ ಸಬರದ ಮುಂತಾದವರು ಹಾಜರಿದ್ದರು.
ಜೆ.ಎಚ್. ಪಟೇಲರು ಸಿಎಂ ಆಗಿದ್ದಾಗ ನಾನು ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದೆ. ಅದೇ ಸಮಯದಲ್ಲಿ ಹಾವೇರಿ ಪ್ರತ್ಯೇಕ ಜಿಲ್ಲೆ ಮಾಡುವ ಪ್ರಸ್ತಾಪ ಬಂದಿತ್ತು. ಆಗ ಸಿಎಂ ಜೆ.ಎಚ್. ಪಟೇಲರು ಹಾವೇರಿ ಪ್ರತ್ಯೇಕ ಜಿಲ್ಲೆ ಮಾಡಲು ಆದೇಶ ಮಾಡಿದ್ದರು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.