ಹಾಸನ: ನಾನು 2028ಕ್ಕೆ ಸಿಎಂ ಆಗಬೇಕೆಂಬ ಬಯಕೆ ಹೊಂದಿದ್ದೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಹಾಸನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಸ್ವತಃ ಹೈಕಮಾಂಡ್ ಹೇಳಿದ್ದು, ಸಿದ್ದರಾಮಯ್ಯ ಅವರ ಬದಲಾವಣೆ ಯಾವುದೇ ಕಾರಣಕ್ಕೂ ಆಗಲ್ಲ. ಅದು ಕೇವಲ ಊಹಾಪೋಹ. ಸಿಎಂ ಬದಲಾವಣೆ ಚರ್ಚೆ ಏನೇ ಇದ್ದರೂ, ಅದು ಸದ್ಯಕ್ಕೆ ಇಲ್ಲ.
ಯಾರು ಏನೇ ಹೇಳಿದರೂ ಸಿಎಂ ಬದಲಾವಣೆ ಚರ್ಚೆ ಪಕ್ಷದೊಳಗೆ ನಡೆದಿಲ್ಲ. ಹಾಗಾಗಿ ಆ ಪ್ರಶ್ನೆ ಉದ್ಭವಿಸದು. ಸಿಎಂ ಹಾಲಿ ಇದ್ದಾರೆ. ನಾನು 2028ಕ್ಕೆ ಸಿಎಂ ಆಗಬೇಕೆಂಬ ಬಯಕೆ ಹೊಂದಿದ್ದೇನೆ. ಅದೇ ಕಾರಣಕ್ಕೆ ನನ್ನ ಮಗಳೂ ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅಲ್ಲಿಯವರೆಗೂ ಕಾಯೋಣ ಎಂದು ಊಹಾಪೋಹಕ್ಕೆ ತೆರೆ ಎಳೆದರು.
ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂಬ ಹೊರಗಿನ ಚರ್ಚೆಗೆ ನಾನು ಉತ್ತರಿಸುವುದಿಲ್ಲ. ನನ್ನ ಹಲವು ಹಿತೈಷಿಗಳು ನಾನೇ ಸಿಎಂ ಎಂದು ಹೇಳಿದ್ದರೂ, ಅದು ಸಿಎಂ ಸಿದ್ದರಾಮಯ್ಯ ಅವರ ಅವಧಿ ಮುಗಿದ ಮೇಲೆ ಅಷ್ಟೇ. ನಾನು ಮುಂದೆ ಸಿಎಂ ಆದರೆ ಅದು ಸಿದ್ದರಾಮಯ್ಯ ಅವರ ಸಹಕಾರದಿಂದಲೇ ಆಗುತ್ತೇನೆ ಎಂದರು.