ಬಾಲಿವುಡ್‌ನಲ್ಲಿ ದಶಕಗಳ ಕಾಲ ಸ್ಟಾರ್ ಆಗಿ ಮಿಂಚಿದರೂ, ಸುನಿಲ್ ಶೆಟ್ಟಿ ಅವರಿಗೆ ತಮ್ಮ ಮೂಲ ಎಂದರೆ ತುಳುನಾಡು. ಮಂಗಳೂರು ಮೂಲದ ನಟ ಸುನಿಲ್ ಶೆಟ್ಟಿ ಇದೀಗ ತಮ್ಮ ಮಾತೃಭಾಷೆಯಾದ ತುಳುವಿನಲ್ಲಿ ನಟಿಸಿರುವ ‘ಜೈ’ ಸಿನಿಮಾ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಹಿಂದಿಯ ಜನಪ್ರಿಯ ಶೋ ‘ಲಲ್ಲನ್ಟಾಪ್’ನಲ್ಲಿ ಮಾತನಾಡಿದ ಅವರು, “ತುಳು ಸಿನಿಮಾಗಳಿಗೆ ಬಹಳ ಕಡಿಮೆ ವೀಕ್ಷಕರಿದ್ದಾರೆ. ಆದರೂ ಆ ಚಿತ್ರರಂಗಕ್ಕೆ ಬೆಂಬಲ ನೀಡಬೇಕು ಎಂಬ ಕಾರಣಕ್ಕೆ ನಾನು ‘ಜೈ’ ಸಿನಿಮಾನಲ್ಲಿ ನಟಿಸಿದೆ” ಎಂದು ಹೇಳಿದ್ದಾರೆ.
ಸಿನಿಮಾಕ್ಕೆ ಸಿಗುತ್ತಿರುವ ಮೆಚ್ಚುಗೆಯ ಬಗ್ಗೆ ಭಾವುಕರಾಗಿ ಮಾತನಾಡಿದ ಸುನಿಲ್ ಶೆಟ್ಟಿ, “ಬಹುಷಃ ನನ್ನ ಮೊದಲ ಸಿನಿಮಾ ‘ಬಲವಾನ್’ನಲ್ಲಿ ನನಗೆ ಸಿಕ್ಕ ಮೆಚ್ಚುಗೆ ಈಗ ‘ಜೈ’ ಸಿನಿಮಾಕ್ಕಾಗಿ ಸಿಗುತ್ತಿದೆ. ಇದು ನನಗೆ ತುಂಬಾ ಸಂತೋಷ ನೀಡಿದೆ” ಎಂದರು.
ಭಾಷೆ ಮತ್ತು ಸಿನಿಮಾ ಕುರಿತು ತಮ್ಮ ನಿಲುವು ಹಂಚಿಕೊಂಡ ಅವರು, “ಇಂದು ಭಾಷೆ ಅಡ್ಡಿಯಾಗುವುದಿಲ್ಲ. ಕಂಟೆಂಟ್ ಚೆನ್ನಾಗಿದ್ದರೆ ಯಾವುದೇ ಭಾಷೆಯ ಸಿನಿಮಾ ಜನರಿಗೆ ಇಷ್ಟವಾಗುತ್ತದೆ” ಎಂದು ಸ್ಪಷ್ಟಪಡಿಸಿದರು.
ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಜೈ’ ಸಿನಿಮಾ ದುಬೈ, ಕತಾರ್, ಮುಂಬೈ, ಗೋವಾ ಸೇರಿದಂತೆ ಹಲವೆಡೆ ಬಿಡುಗಡೆಯಾಗಿದ್ದು, 50 ದಿನಗಳನ್ನು ಪೂರೈಸಿ ಉತ್ತಮ ಗಳಿಕೆ ಮಾಡುತ್ತಿದೆ. ತುಳು ಚಿತ್ರರಂಗಕ್ಕೆ ಸುನಿಲ್ ಶೆಟ್ಟಿ ನೀಡಿರುವ ಈ ಬೆಂಬಲವನ್ನು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ.



