ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಮುಂಡರಗಿಯ ಶ್ರೀ ಜಗದ್ಗುರು ಅನ್ನದಾನೇಶ್ವರ ವಿದ್ಯಾ ಸಮಿತಿ 101 ವರ್ಷಗಳನ್ನು ಪೂರೈಸಿ ತನ್ನ ಶತಮಾನೋತ್ಸವ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳುತ್ತಿರುವುದು ಅತ್ಯಂತ ಸಂತಸ ತಂದಿದೆ. ಕಾರ್ಯಕ್ರಮದಲ್ಲಿ ಅತ್ಯಂತ ಅಭಿಮಾನದಿಂದ ಭಾಗವಹಿಸುವುದಾಗಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳಿಂದ ಆಮಂತ್ರಣ ಸ್ವೀಕರಿಸಿ ಮಾತನಾಡಿದ ಅವರು, ಅನ್ನದಾನೇಶ್ವರ ವಿದ್ಯಾ ಸಮಿತಿ ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳನ್ನು ಕೇಂದ್ರೀಕೃತವಾಗಿಟ್ಟುಕೊಂಡು ಅಕ್ಷರ ದಾಸೋಹ, ಅನ್ನದಾಸೋಹ ಮಾಡುವ ಮೂಲಕ ಸರಕಾರ ಮಾಡದೆ ಇರುವ ಕೆಲಸವನ್ನು ಮಾಡುತ್ತಾ ಬಂದಿದೆ. ಹೀಗಾಗಿ ಇದು ಉತ್ತರ ಕರ್ನಾಟಕದ ಹೆಮ್ಮೆಯ ವಿದ್ಯಾ ಸಮಿತಿಯಾಗಿದೆ ಎಂದು ಹೇಳಿದರು.
ಶ್ರೀಗಳು ನೂರಾರು ಪುಸ್ತಕಗಳನ್ನು ಬರೆಯುವ ಮೂಲಕ ಶ್ರೇಷ್ಠ, ಪೂಜ್ಯ ಸಾಹಿತಿಗಳಾಗಿದ್ದಾರೆ. ಇದರ ಜೊತೆಗೆ ಧಾರ್ಮಿಕ ಹಾಗೂ ವಿವಿಧ ಸಮಾಜಮುಖಿ ಸಂಘಟನೆಗಳಿಗೆ ಆರ್ಥಿಕ ನೆರವು, ಭೂಮಿ ದಾನ ಮಾಡುವ ಮೂಲಕ ಅವರ ಎಲ್ಲ ಕೆಲಸಗಳಿಗೆ ಸಹಕಾರ ನೀಡುತ್ತ ಬಂದಿರುವುದು ವಿಶೇಷವಾಗಿದೆ. ಶ್ರೀ ಮಠ ಬೇಡುವ ಮಠವಾಗದೆ ಕೊಡುವ ಮಠವಾಗಿದ್ದು ವಿಶೇಷ. ಯಾವುದೇ ಫಲಾಪೇಕ್ಷೆ ಇಲ್ಲದೆ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಈ ಸಂಸ್ಥೆಯ ಕಾರ್ಯ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶತಮಾನೋತ್ಸವ ಸಂಭ್ರಮ ಸಮಿತಿಯ ಗೌರವಾಧ್ಯಕ್ಷರು ಹಾಗೂ ಶಿರಹಟ್ಟಿ ಮತಕ್ಷೇತ್ರದ ಶಾಸಕರಾದ ಡಾ. ಚಂದ್ರು ಲಮಾಣಿ, ಡಾ. ಬಸವರಾಜ ಧಾರವಾಡ, ಸಂಸ್ಥೆಯ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ, ಎಂ.ಎಸ್. ಡಂಬಳ, ಬಾಲಕಿಯರ ಪ್ರೌಢಶಾಲೆಯ ಚೇರಮನ್ ಎಂ.ಎಸ್. ಶಿವಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಎಂ. ಅಗಡಿ, ಉತ್ತರ ಕರ್ನಾಟಕ ಪತ್ರಿಕೆ ಸಂಪಾದಕ ಅವಿನಾಶ್ ಸಾಲ್ಮನಿ ಮುಂತಾದವರು ಉಪಸ್ಥಿತರಿದ್ದರು.



