ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜಾತಿ, ಮತ, ಪಂಥಗಳನ್ನು ಮೀರಿ ಮಾನವ ಕುಲಕೋಟಿಯ ಕಲ್ಯಾಣಕ್ಕಾಗಿಯೇ ಅವತರಿಸಿದ ಲಿಂ.ವೀರಗಂಗಾಧರ ಜಗದ್ಗುರುಗಳ ತಪೋಭೂಮಿ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಪ್ರತಿಷ್ಠಾಪನಾ ಕಾರ್ಯ ಸಾಕಾರದೊಂದಿಗೆ ಇದೊಂದು ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲ ಹೇಳಿದರು.
ಅವರು ಲಕ್ಷ್ಮೇಶ್ವರ ತಾಲೂಕಿನ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀರಂಭಾಪುರಿ ಲಿಂ.ಜಗದ್ಗುರು ವೀರಗಂಗಾಧರ ಪ್ರಸಾದ ನಿಲಯದ ಉದ್ಘಾಟಿಸಿ ಮಾತನಾಡುತ್ತಿದ್ದರು.
`ಮಾನವ ಧರ್ಮಕ್ಕೆ ಜಯವಾಗಲಿ-ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಅವರ ಮಹಾಮಂತ್ರ ಇಂದಿನ ಅಗತ್ಯವಾಗಿದೆ. ಸರ್ವ ಧರ್ಮ ಸಮನ್ವಯದ ಈ ಕ್ಷೇತ್ರದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ ಹೀಗೆ ಸರ್ವಧರ್ಮ ಗುರುಗಳ ದೇವಸ್ಥಾನ ನಿರ್ಮಿಸಿರುವುದು ಅವರ ಸರ್ವ ಧರ್ಮದ ಸಮನ್ವಯತೆಗೆ ಸಾಕ್ಷಿಯಾಗಿದೆ. ಇಂದು ಧರ್ಮ ಗುರುಗಳ ಮಹಾಮಂತ್ರ, ವಿಚಾರಗಳನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಂಡು ಆತ್ಮಾವಲೋಕನದೊಂದಿಗೆ ಬಾಳಬೇಕಾಗಿದೆ. ಈ ಪುಣ್ಯ ಕ್ಷೇತ್ರ ನನ್ನ ತವರು ಜಿಲ್ಲೆಯಲ್ಲಿರುವುದು ನನ್ನ ಹೆಮ್ಮೆಯಾಗಿದ್ದು, ಪುಣ್ಯ ಕ್ಷೇತ್ರದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದರು.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಸಾದ ನಿಲಯ ಅಗತ್ಯವಾಗಿದೆ. ಆದ್ದರಿಂದಲೇ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿನ ದೇವಸ್ಥಾನಗಳು ಪ್ರಸಿದ್ಧಿ ಪಡೆಯಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ಮಲೇಬೆನ್ನೂರಿನ ಶ್ರೀಮಠದ ಭಕ್ತರು ಪ್ರಸಾದ ನಿಲಯ ಪ್ರಾರಂಭದ ಜವಾಬ್ದಾರಿ ಹೊತ್ತಿರುವುದು ಶ್ಲಾಘನೀಯ ಎಂದರು.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮತ್ತು ಜಿ.ಎಂ. ಮಹಾಂತಶೆಟ್ಟರ ಅವರು, ತ್ರಿಕೋಟಿ ಶಿವಲಿಂಗ ಪ್ರತಿಷ್ಠಾಪನಾ ಕಾರ್ಯಕ್ಕೆ ಸರ್ಕಾರದಿಂದ ಈಗಾಗಲೇ 6 ಕೋಟಿ ರೂ ಬಿಡುಗಡೆಯಾಗಿದ್ದು, ಕಾರ್ಯ ಪ್ರಾರಂಭಗೊಂಡಿರುವ ಬಗ್ಗೆ ಮತ್ತು ರೂಪುರೇಷೆಯ ಬಗ್ಗೆ ತಿಳಿಸಿದರು.
ಎಮ್ಮಿಗನೂರಿನ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಕಲಾದಗಿ ಪಂಚಗ್ರಹ ಹಿರೇಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಸೇರಿ ಹಲವು ಶಿವಾಚಾರ್ಯರಿದ್ದರು. ಶಾಸಕರಾದ ಡಾ. ಚಂದ್ರು ಲಮಾಣಿ, ಎಸ್.ವಿ. ಸಂಕನೂರ ಮಾತನಾಡಿ, ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಮಾಜಿ ಶಾಸಕ ರಾಮಣ್ಣ ಲಮಾಣಿ, ಕುಸುಮಾವತಿ ಶಿವಳ್ಳಿ, ಆನಂದಸ್ವಾಮಿ ಗಡ್ಡದೇವರಮಠ, ಎಸ್.ಪಿ. ಬಳಿಗಾರ, ಸುಜಾತಾ ದೊಡ್ಡಮನಿ, ಗುರುನಾಥ ದಾನಪ್ಪನವರ, ಚನ್ನಪ್ಪ ಜಗಲಿ, ಸೋಮಣ್ಣ ಡಾಣಗಲ್, ಪದ್ಮರಾಜ ಪಾಟೀಲ, ಬಸವೇಶ ಮಹಾಂತಶೆಟ್ಟರ, ಸತೀಶಗೌಡ ಪಾಟೀಲ, ಬಿ. ಚಿದಾನಂದಪ್ಪ, ಬಿ.ಎಂ. ವಾಗೀಶಸ್ವಾಮಿ, ಬಿ.ಎಂ. ಹಾಲಸ್ವಾಮಿ, ಅಕ್ಕಿ ರಾಜಣ್ಣ, ಬಿ. ಪಂಚಪ್ಪ, ಡಾ. ಸುಮನ್, ಸೋಮೇಶ್ವರ ಗಡ್ಡಿ ಸೇರಿದಂತೆ ಅನೇಕ ಮುಖಂಡರು, ಭಕ್ತರು ಇದ್ದರು. ಸಾಂಬಯ್ಯ ಹಿರೇಮಠ ನಿರೂಪಿಸಿದರು.
ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಸೇರಿ ಕಲಾದಗಿ, ಎಮ್ಮಿಗನೂರ ಇತರೇ ಶಿವಾಚಾರ್ಯರೊಂದಿಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನುದಾನ ಕಲ್ಪಿಸುವಂತೆ ಮನವಿ ಮಾಡಿ ಮಾತನಾಡಿ, ಲಿಂ.ವೀರಗಂಗಾಧರ ಜಗದ್ಗುರುಗಳ ಸಂಕಲ್ಪ ಶ್ರೀಮಠದ ಮಹಾಭಕ್ತರಾದ ಡಿಸಿಎಂ ಡಿ.ಕೆ. ಶಿವಕುಮಾರ ಮತ್ತು ಭಕ್ತರ ತನು-ಮನ-ಧನದ ಸಹಾಯ-ಸಹಕಾರದಿಂದ ಸಾಕಾರಗೊಳ್ಳುತ್ತಿರುವುದು ಸಂತಸ ತಂದಿದೆ. ಈ ಪರಮಶ್ರೇಷ್ಠ ಕಾರ್ಯ ಪೂರ್ಣಗೊಳ್ಳಲು ಎಲ್ಲರೂ ಸಹಕರಿಸಬೇಕು ಎಂದರು.