ಬಿಸಿಸಿಐ, ಐಸಿಸಿ ಹಾಗೂ ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ನಡುವೆ ಭಾರೀ ತಿಕ್ಕಾಟಕ್ಕೆ ಕಾರಣವಾಗಿದ್ದ ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಇಂದಿನಿಂದ ಶುರುವಾಗಲಿದೆ. ಪಾಕಿಸ್ತಾನ ಹಾಗೂ ದುಬೈನ ಕ್ರೀಡಾಂಗಣಗಳು ವಿಶ್ವದ ಬಲಿಷ್ಠ ತಂಡಗಳ ನಡುವಿನ ಜಿದ್ದಾಜಿದ್ದಿನ ಹಣಾಹಣಿಗೆ ಸಜ್ಜಾಗಿವೆ.
ಏಕದಿನ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ವಿಶ್ವಕಪ್ ನಂತರ ಎರಡನೇ ಅತಿ ದೊಡ್ಡ ಪಂದ್ಯಾವಳಿ ಎಂದು ಕರೆಯಲ್ಪಡುವ ಈ ಟೂರ್ನಮೆಂಟ್ ಮಾರ್ಚ್ 9 ರವರೆಗೆ ನಡೆಯಲಿದ್ದು, ಸುಮಾರು 3 ದಶಕಗಳ ನಂತರ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ಇದಾಗಿದೆ.
ಟೀಂ ಇಂಡಿಯಾ ವೇಳಾಪಟ್ಟಿ
ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 8 ತಂಡಗಳು ಆಡಲಿದ್ದು, 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಟೀಂ ಇಂಡಿಯಾ ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶದೊಂದಿಗೆ ಎ ಗುಂಪಿನಲ್ಲಿದೆ. ಗುಂಪು ಹಂತದಲ್ಲಿ ಈ ಮೂರು ತಂಡಗಳ ವಿರುದ್ಧ ತಲಾ ಒಂದು ಪಂದ್ಯವನ್ನು ಆಡಲಿದೆ. ಇದಾದ ಬಳಿಕ ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ನಡೆಯಲಿದೆ.
ಫೆಬ್ರವರಿ 20 ರಿಂದ ಈ ಟೂರ್ನಿಯಲ್ಲಿ ಟೀಂ ಇಂಡಿಯಾದ ಅಭಿಯಾನ ಆರಂಭವಾಗಲಿದ್ದು, ರೋಹಿತ್ ಪಡೆ ತನ್ನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ನಂತರ ಟೀಂ ಇಂಡಿಯಾ ತನ್ನ ಎರಡನೇ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಲಿದೆ. ಈ ಪಂದ್ಯ ಫೆಬ್ರವರಿ 20 ರಂದು ನಡೆಯಲಿದೆ. ಇದರ ನಂತರ, ಗುಂಪಿನ ಕೊನೆಯ ಪಂದ್ಯದಲ್ಲಿ, ಮಾರ್ಚ್ 2 ರಂದು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಭಾರತ ಎರಡು ಬಾರಿ ಚಾಂಪಿಯನ್
ವಾಸ್ತವವಾಗಿ ಚಾಂಪಿಯನ್ಸ್ ಟ್ರೋಫಿಯನ್ನು 1998 ರಲ್ಲಿ ಪ್ರಾರಂಭಿಸಲಾಯಿತು. ಆದರೆ ಕಳೆದ 8 ವರ್ಷಗಳಿಂದ ಈ ಪಂದ್ಯಾವಳಿಯನ್ನು ಆಯೋಜಿಸಿರಲಿಲ್ಲ. ಕಳೆದ ಬಾರಿ ಅಂದರೆ 2017ರಲ್ಲಿ ನಡೆದಿದ್ದ ಈ ಟೂರ್ನಿಯ ಫೈನಲ್ನಲ್ಲಿ ಪಾಕಿಸ್ತಾನ, ಟೀಂ ಇಂಡಿಯಾವನ್ನು ಸೋಲಿಸಿತ್ತು. ಇನ್ನು ಈ ಟೂರ್ನಿಯಲ್ಲಿ ಭಾರತ 2 ಬಾರಿ ಚಾಂಪಿಯನ್ ಆಗಿದ್ದು, ಮೊದಲ ಬಾರಿಗೆ 2002ರಲ್ಲಿ ಟೀಂ ಇಂಡಿಯಾ ಮತ್ತು ಶ್ರೀಲಂಕಾ ಜಂಟಿ ವಿಜೇತರಾಗಿದ್ದವು.ಆ ಬಳಿಕ 2013 ರಲ್ಲಿ ನಡೆದಿದ್ದ ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಚಾಂಪಿಯನ್ಸ್ ಟ್ರೋಫಿ 2025 ರ ಮೊದಲ ಪಂದ್ಯ ಯಾವಾಗ ನಡೆಯಲಿದೆ?
ಚಾಂಪಿಯನ್ಸ್ ಟ್ರೋಫಿ 2025 ರ ಮೊದಲ ಪಂದ್ಯ ಬುಧವಾರ, ಫೆಬ್ರವರಿ 19 ರಂದು ನಡೆಯಲಿದೆ.
ಚಾಂಪಿಯನ್ಸ್ ಟ್ರೋಫಿ 2025 ಪಂದ್ಯಗಳು ಎಲ್ಲಿ ನಡೆಯುತ್ತವೆ?
ಚಾಂಪಿಯನ್ಸ್ ಟ್ರೋಫಿ 2025 ಪಂದ್ಯಗಳು ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯುತ್ತವೆ.
ಚಾಂಪಿಯನ್ಸ್ ಟ್ರೋಫಿ 2025 ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 2:30 ಕ್ಕೆ ಪ್ರಾರಂಭವಾಗುತ್ತವೆ. ಪಂದ್ಯಗಳ ಟಾಸ್ ಭಾರತೀಯ ಕಾಲಮಾನ ಮಧ್ಯಾಹ್ನ 2:00 ಕ್ಕೆ ನಡೆಯಲಿದೆ.
ಚಾಂಪಿಯನ್ಸ್ ಟ್ರೋಫಿ 2025 ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಜಿಯೋಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.