ಐಸಿಸಿ ಟಿ20 ಆಲ್‌ರೌಂಡರ್ ಶ್ರೇಯಾಂಕದಲ್ಲಿ ಹಾರ್ದಿಕ್ ಪಾಂಡ್ಯ ನಂ.1 ಸ್ಥಾನ ಕಳೆದುಕೊಂಡಿದ್ದು, ಪಾಕಿಸ್ತಾನದ ಸ್ಯಾಮ್ ಅಯೂಬ್ ಅಗ್ರಸ್ಥಾನಕ್ಕೇರಿದ್ದಾರೆ.
ಐಸಿಸಿ ಬಿಡುಗಡೆ ಮಾಡಿರುವ ಟಿ20 ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹಿನ್ನಡೆ ಅನುಭವಿಸಿದ್ದು, ತಮ್ಮ ನಂಬರ್ ಒನ್ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಅಚ್ಚರಿಯ ಸಂಗತಿ ಎಂಬಂತೆ ಪಾಕಿಸ್ತಾನದ ಯುವ ಆಟಗಾರ ಸ್ಯಾಮ್ ಅಯೂಬ್ ನಂಬರ್ 1 ಸ್ಥಾನಕ್ಕೇರಿದ್ದಾರೆ.
ಪಾಕಿಸ್ತಾನದ ಯುವ ಆಲ್‌ರೌಂಡರ್ ಮತ್ತು ಅರೆಕಾಲಿಕ ಆಫ್-ಸ್ಪಿನ್ನರ್ ಆಗಿರುವ ಸ್ಯಾಮ್ ಅಯೂಬ್ ಭಾರತದ ಸ್ಟಾರ್ ಹಾರ್ದಿಕ್ ಪಾಂಡ್ಯ ಅವರನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ. 241 ರೇಟಿಂಗ್ ಪಾಯಿಂಟ್‌ಗಳನ್ನು ಕಲೆಹಾಕಿರುವ ಸ್ಯಾಮ್ ಅಯೂಬ್ ನಾಲ್ಕು ಸ್ಥಾನಗಳನ್ನು ಏರಿ ಅಗ್ರಸ್ಥಾನವನ್ನು ತಲುಪಿದ್ದಾರೆ.
ಗಮನಾರ್ಹ ಸಂಗತಿಯೆಂದರೆ ಏಷ್ಯಾಕಪ್‌ನಲ್ಲಿ ಸ್ಯಾಮ್ ಅವರ ಬ್ಯಾಟಿಂಗ್ ಪ್ರದರ್ಶನ ನಿರಾಶಾದಾಯಕವಾಗಿತ್ತು, ಆದರೆ ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಆಡಿದ ಏಳು ಪಂದ್ಯಗಳಲ್ಲಿ ಎಂಟು ವಿಕೆಟ್‌ಗಳನ್ನು ಕಬಳಿಸಿದ್ದ ಆಯೂಬ್ 6.40 ರ ಎಕಾನಮಿ ದರದಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟರು. ಆದಾಗ್ಯೂ ಬ್ಯಾಟಿಂಗ್‌ನಲ್ಲಿ ಮಾತ್ರ ಕೇವಲ 37 ರನ್ ಕಲೆಹಾಕಿದ್ದರು.
ಆಡಿದ 7 ಪಂದ್ಯಗಳಲ್ಲಿ ಸ್ಯಾಮ್ ಆಯೂಬ್ಗೆ 4 ಪಂದ್ಯಗಳಲ್ಲಿ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರನ್ನು ತೀವ್ರ ಟೀಕೆಗೆ ಗುರಿ ಪಡಿಸಲಾಗಿತ್ತು. ಆದಾಗ್ಯೂ, ಅವರ ಬೌಲಿಂಗ್ ಅವರನ್ನು ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿಸಿದೆ.