ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಕ್ಕಳಲ್ಲಿ ಸುಪ್ತವಾಗಿರುವ ಸಂಗೀತ, ನೃತ್ಯ, ಚಿತ್ರಕಲೆ, ಕ್ರೀಡೆ ಹೀಗೆ ಯಾವುದೇ ವಿಶೇಷ ಪ್ರತಿಭೆಗಳನ್ನು ಬಾಲ್ಯದಲ್ಲಿಯೇ ಗುರುತಿಸಿ ಅದಕ್ಕೆ ಸಂಸ್ಕಾರ, ಶಿಸ್ತು, ಸಂಯಮದ ನೀರೆರೆದು ಪ್ರೋತ್ಸಾಹಿಸಬೇಕು ಎಂದು ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.
ಅವರು ಪಟ್ಟಣದ ರಂಭಾಪುರಿ ಜ.ವೀರಗಂಗಾಧರ ಸಮುದಾಯ ಭವನದಲ್ಲಿ ಕಲಾ ವೈಭವ ಸಾಂಸ್ಕೃತಿಕ ವಿವಿಧೋದ್ದೇಶಗಳ ಸಂಸ್ಥೆಯಿಂದ ನಡೆದ ನಟರಾಜ ನರ್ತನ ಭರತನಾಟ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭರತನಾಟ್ಯ ದೇಶದ ಪ್ರಾಚೀನ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಪರಂಪರೆ ಬಿಂಬಿಸುವ ಭಾರತೀಯ ಸಾಂಪ್ರದಾಯಿಕ ಶ್ರೇಷ್ಠ ನೃತ್ಯ ಕಲೆಯಾಗಿದೆ. ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ, ದೇವರು, ಧರ್ಮ, ಗುರು-ಹಿರಿಯರಲ್ಲಿ ವಿಧೇಯತೆ ಜತೆಗೆ ಮಾನಸಿಕ ದೈಹಿಕ ಆರೋಗ್ಯವನ್ನುಂಟುಮಾಡುತ್ತದೆ. ದೇಶದ ಸಂಪತ್ತಾದ ಮಕ್ಕಳಲ್ಲಿ ನಮ್ಮ ಸಾಂಪ್ರದಾಯಿಕ ಕಲೆಗಳನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಕಾರ್ಯ ನಿರಂತರವಾಗಿರಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಲಲಿತಕ್ಕ ಕೆರಿಮನಿ, ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಧಾ ಹುಚ್ಚಣ್ಣವರ ಮಾತನಾಡಿ, ಪ್ರಸ್ತುತ ಟಿ.ವಿ., ಕಂಪ್ಯೂಟರ್, ಮೊಬೈಲ್ ಇತರೇ ತಂತ್ರಜ್ಞಾನದ ಪ್ರಭಾವದ ನಡುವೆಯೂ ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯ ನೃತ್ಯಕಲೆ, ಸಂಗೀತ, ಸಾಹಿತ್ಯ, ಹಬ್ಬ, ಉತ್ಸವ, ಆಚರಣೆಗಳಲ್ಲಿ ಮಕ್ಕಳನ್ನು ತೊಡಗಿಸಿ ಉಳಿಸಿ-ಬೆಳೆಸಿ-ಪ್ರೋತ್ಸಾಹಿಸುವ ಗುರುತರ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು.
ಕಲಾ ವೈಭವ ಸಂಸ್ಥೆಯ ಮುಖ್ಯಸ್ಥೆ ಭವ್ಯಾ ಕತ್ತಿ ಪ್ರಾಸ್ತಾವಿಕ ನುಡಿದರು. ಈ ವೇಳೆ ಸಿದ್ದಲಿಂಗಯ್ಯಸ್ವಾಮಿ ಹಿರೇಮಠ, ಗದಗನ ವಿ. ರಾಘವಿ ಜೋತಿಶ್ರೀ ಸೇರಿ ಪಾಲಕರು ಪಾಲ್ಗೊಂಡಿದ್ದರು. ಬಳಿಕ ಸಂಸ್ಥೆಯ ಭರತನಾಟ್ಯ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಕಾರ್ಯಕ್ರಮ ನೆರವೇರಿತು.



