ಬೆಂಗಳೂರು:- ಬ್ರೇಕ್‌ಫಾಸ್ಟ್, ಡಿನ್ನರ್ ಮೀಟಿಂಗ್ ನಿಂದ ಜನರಿಗೆ ಯಾವ ಸಂದೇಶ ಕೊಡ್ತೀರಾ.? ಎಂದು ಕೈ ನಾಯಕರ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಬಡವರಿಗೆ ಆರೋಗ್ಯ ಸೇವೆಗಳು ಸಿಗುತ್ತಿಲ್ಲ, ರಾಜ್ಯಾದ್ಯಂತ 7 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚಿದ್ದು ಮಕ್ಕಳ ಶಿಕ್ಷಣಕ್ಕೆ ಆಪತ್ತು ಬಂದಿದೆ. ಬ್ರೇಕ್‌ಫಾಸ್ಟ್, ಡಿನ್ನರ್ ಮೀಟಿಂಗ್ ಮಾಡ್ತಾ ಹೋದರೆ ಜನರಿಗೆ ಯಾವ ಸಂದೇಶ ಕೊಡ್ತೀರಾ? ಬ್ರೇಕ್ ಫಾಸ್ಟ್‌ಗೆ ಇಡ್ಲಿ, ಮಧ್ಯಾಹ್ನ ನಾಟಿ ಕೋಳಿ, ಡಿನ್ನರ್‌ಗೆ ಬೆಳ್ಳುಳ್ಳಿ ಕಬಾಬ್ ಬರುತ್ತೇನೋ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವುದು ಸರಿಯಿಲ್ಲ. ಸರಿ ಇದ್ದರೆ ಆಡಳಿತದಲ್ಲಿ ತೋರಿಸಿ. ಅದು ಬಿಟ್ಟು ಈ ಬ್ರೇಕ್‌ಫಾಸ್ಟ್ ಮೀಟಿಂಗ್, ಡಿನ್ನರ್ ಮೀಟಿಂಗ್ ಯಾಕೆ ಮಾಡಬೇಕು. ರಾಜ್ಯದಲ್ಲಿ ಉಪಹಾರ ಇಲಾಖೆ ಮಾತ್ರ ಸಕ್ರಿಯವಾಗಿದೆ ಎಂದು ವಾಗ್ದಾಳಿ ನಡೆಸಿದರು. ಅರೋಗ್ಯ ಇಲಾಖೆಯಲ್ಲಿ ಗರ್ಭಿಣಿಯರು ಸೇರಿ ಮಕ್ಕಳು ಎಷ್ಟು ಬಲಿಯಾದರು. ಅರೋಗ್ಯ ಇಲಾಖೆ ರಾಜ್ಯದಲ್ಲಿ ಸಂಪೂರ್ಣ ಕುಸಿದಿದೆ. ಅರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ವೈಫಲ್ಯವಾಗಿದೆ. ರಾಜ್ಯದಲ್ಲಿ ಸರ್ಕಾರಿ ಶಾಲೆ ಮುಚ್ಚುತ್ತಿವೆ. ಶಿಕ್ಷಕರ ನೇಮಕಾತಿ ಆಗ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು 2.5 ವರ್ಷ ಆಗಿದೆ.136ಕ್ಕೂ ಹೆಚ್ಚು ಶಾಸಕರಿದ್ದಾರೆ. ಗ್ಯಾರಂಟಿಗಳು ಪ್ರತಿ ತಿಂಗಳು ಸಮರ್ಪಕವಾಗಿ ಕೊಡ್ತಿಲ್ಲ. ಚುನಾವಣೆ ಹತ್ತಿರ ಬಂದರೆ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡ್ತಾರೆ. ಸರ್ಕಾರದ ಹಣ ಚುನಾವಣೆಗೆ ಬಳಸ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.



