ಬಿಗ್ ಬಾಸ್ ರಿಯಾಲಿಟಿ ಶೋ ಖ್ಯಾತಿಯ ರಂಜಿತ್ ಕುಟುಂಬದ ವಿವಾದ ಇದೀಗ ಬೀದಿಗೆ ಬಂದು ನಿಂತಿದೆ. ಅಕ್ಕನ ಹೆಸರಿನಲ್ಲಿ ಮನೆ ತೆಗೆದುಕೊಂಡಿದ್ದೇ ಇದಕ್ಕೆಲ್ಲಾ ಕಾರಣವಾಗಿದ್ದು ಈ ಬಗ್ಗೆ ರಂಜಿತ್ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ನಡೆದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ನಟ ರಂಜಿತ್, ‘ನಾನು ಅಟ್ಯಾಕ್ ಮಾಡಿಲ್ಲ. ಅಟ್ಯಾಕ್ ಮಾಡಿದ್ದರೆ ಅವರು ಇರುತ್ತಲೇ ಇರಲಿಲ್ಲ. ಅವರು 3ನೇ ಫ್ಲೋರ್ನಲ್ಲಿ ಇರುವುದು. ನಮ್ಮ ಮನೆ ಮೊದಲ ಫ್ಲೋರ್ನಲ್ಲಿ ಇದೆ. ಅವರು ನಮ್ಮ ಮನೆ ಒಳಗೆ ಬಂದು ಗಲಾಟೆ ಮಾಡಿದರು. ವಸ್ತುಗಳನ್ನು ಬಿಸಾಕಿದರು. ಆಗ ನಮ್ಮ ಹೆಂಡತಿ ಅಡ್ಡ ನಿಂತುಕೊಂಡರು. ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ’ ಎಂದಿದ್ದಾರೆ.
‘ಪೂರ್ತಿ ವಿಡಿಯೋವನ್ನು ಅವರು ತೋರಿಸುತ್ತಿಲ್ಲ. ಯಾಕೆಂದರೆ ಮೊದಲು ಬಂದು ಗಲಾಟೆ ಮಾಡಿದ್ದೇ ಅವರು. ಇದು ಸಿವಿಲ್ ಮ್ಯಾಟರ್. ಈ ಮನೆ ತಮ್ಮದು ಎಂದು ಅವರು ನನಗೆ ಲೀಗಲ್ ನೋಟಿಸ್ ಕಳಿಸಿದ್ದರು. ನಾನು ಅದಕ್ಕೆ ಪ್ರತಿಕ್ರಿಯೆ ನೀಡಿದ್ದೇನೆ. ಆದರೂ ಕೂಡ ಅವರು ಪೊಲೀಸ್ ಠಾಣೆಗೆ ಹೋಗಿ ಕುಳಿತುಕೊಂಡರು. ನೀವು ಕೋರ್ಟ್ಗೆ ಹೋಗಬೇಕು, ಗಲಾಟೆ ಮಾಡಿಕೊಳ್ಳುವಂತಿಲ್ಲ ಅಂತ ಪೊಲೀಸರು ಹೇಳಿದ್ದಾರೆ. ಆದರೂ ಕೂಡ ನಮ್ಮ ತಂದೆ ಬಂದು ನನಗೆ ಮತ್ತು ನನ್ನ ಹೆಂಡತಿಗೆ ಹೊಡೆದಿದ್ದಾರೆ’ ಎಂದು ರಂಜಿತ್ ಹೇಳಿದ್ದಾರೆ
‘ಮತ್ತೆ ನಮ್ಮ ಅಕ್ಕ ಬಂದು ಹೊಡೆದಿದ್ದಾರೆ. ನಾನು ಸೆಲೆಬ್ರಿಟಿ ಆಗಿರುವುದರಿಂದ ವಿಡಿಯೋ ಮಾಡಿಕೊಂಡು ಈ ರೀತಿ ಬಿಂಬಿಸೋಣ ಎಂಬುದು ಅವರ ಉದ್ದೇಶ. ಸ್ನೇಹಿತರು ಮತ್ತು ಸಂಬಂಧಿಕರು ಸಂಧಾನಕ್ಕೆ ಪ್ರಯತ್ನಿಸಿದ್ದಾರೆ. ಆದರೂ ಅವರು ಸಿದ್ಧರಿಲ್ಲ. 2017-18ರಲ್ಲಿ ನಾನು ಶನಿ ಧಾರಾವಾಹಿ ಮಾಡುವಾಗ ತೆಗೆದುಕೊಂಡ ಮನೆ ಇದು. ಕಲಾವಿದನಾದ ಕಾರಣ ನನಗೆ ಸಾಲ ಸಿಗುವುದಿಲ್ಲ ಎಂಬ ಕಾರಣಕ್ಕೆ ನಮ್ಮ ಅಕ್ಕನ ಹೆಸರಲ್ಲಿ ಮಾಡಿದ್ದೆ. ಅದೊಂದೇ ಕಾರಣಕ್ಕೆ ಅವರು ಈಗ ಬಂದು ಗಲಾಟೆ ಮಾಡುತ್ತಿದ್ದಾರೆ’ ಎಂದು ರಂಜಿತ್ ವಿವರಿಸಿದ್ದಾರೆ.
‘ಕೋರ್ಟ್ನಲ್ಲಿಯೇ ಇದನ್ನು ಬಗೆಹರಿಸಿಕೊಳ್ಳಬೇಕು. ಮಾಧ್ಯಮಕ್ಕೆ ಬರುವ ಅವಶ್ಯಕತೆ ಇರಲಿಲ್ಲ. ಬಲವಂತವಾಗಿ ಮನೆ ಒಳಗೆ ಬಂದು ಹೊಡೆದಿದ್ದಾರೆ. ನಾನು ಸೆಲೆಬ್ರಿಟಿ ಆಗಿರುವುದರಿಂದ ನನ್ನ ಮರ್ಯಾದೆ ತೆಗೆದರೆ ಮನೆ ಬಿಟ್ಟು ಹೋಗುತ್ತಾನೆ ಎಂಬ ಉದ್ದೇಶದಿಂದ ಹೀಗೆಲ್ಲ ಮಾಡಿದ್ದಾರೆ. ನಿಮಗೆ ಅವರು ಕೊಟ್ಟಿರುವುದು ಒಂದು ರೀತಿಯ ವಿಡಿಯೋ ಮಾತ್ರ. ಬೇರೆ ವಿಡಿಯೋಗಳು ನನ್ನ ಬಳಿಯೂ ಇವೆ. ನನ್ನ ಹೆಂಡತಿ ಕುಳಿತಿರುವಾಗ ಅವರು ಕೆಟ್ಟದಾಗಿ ವಿಡಿಯೋ ಮಾಡುತ್ತಾರೆ. ಅದೆಲ್ಲ ತಪ್ಪಲ್ಲವಾ? ನನ್ನನ್ನು ಕೆರಳಿಸಬೇಕು ಅಂತ ಹೀಗೆ ಮಾಡಿದ್ದಾರೆ’ ಎಂದು ರಂಜಿತ್ ಹೇಳಿದ್ದಾರೆ.
‘ಮದುವೆ ಆದಮೇಲೆ ಸಮಸ್ಯೆ ಕೊಡುತ್ತಿದ್ದಾರೆ. ಇಷ್ಟು ದಿನ ಇಎಂಐ ಕಳಿಸಿದ್ದೇನೆ. ಇನ್ಮೇಲೆ ಕೂಡ ಕಳಿಸುತ್ತೇನೆ. ಆದರೂ ಲೀಗಲ್ ನೋಟಿಸ್ ಕಳಿಸಿದರು. ಅದಕ್ಕೆ ನಾನು ಸ್ವಲ್ಪ ಕಾದೆ. ಆದರೆ ನನ್ನನ್ನು ಸ್ಟೇಷನ್ ಮೆಟ್ಟಿಲು ಹತ್ತಿಸಿದ್ದಾರೆ. 1.25 ಕೋಟಿ ರೂಪಾಯಿ ಬೆಲೆಯ ಮನೆ ಇದು. ಅಷ್ಟು ಹಣ ತಮಗೆ ಬೇಕು ಎನ್ನುತ್ತಿದ್ದಾರೆ. ನಾನು ಮನೆಯನ್ನೂ ಬಿಟ್ಟು, ದುಡ್ಡನ್ನೂ ಕೊಡಬೇಕು ಎಂದರೆ ಹೇಗೆ ಸಾಧ್ಯ?’ ಎಂದು ರಂಜಿತ್ ಪ್ರಶ್ನೆ ಮಾಡಿದ್ದಾರೆ.