ಬೆಂಗಳೂರು: ಕನ್ನಡಿಗರು ಒಗ್ಗಟ್ಟು ಆಗದಿದ್ದರೆ ನೀರಿನ ನ್ಯಾಯ ಸಿಗಲ್ಲ ಎಂದು ಕೇಂದ್ರ ಸಚಿವ HD ಕುಮಾರಸ್ವಾಮಿ ಎಚ್ಚರಿಕೆ ಕೊಟ್ಟಿದ್ದಾರೆ.
ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಮಾತನಾಡಿದ ಅವರು, ನಮ್ಮ ನೀರು ನಮ್ಮ ಹಕ್ಕು ಎಂದು ಹೇಳುತ್ತಾ ನಮ್ಮ ತೆರಿಗೆ ಹಣದಲ್ಲಿ ಅಣೆಕಟ್ಟುಗಳನ್ನು ಕಟ್ಟಿ ತಮಿಳುನಾಡಿಗೆ ನೀರು ಹರಿಸುತ್ತಾ ನಾವು ನೀರಗಂಟಿ ಕೆಲಸ ಮಾಡುತ್ತಿದ್ದೇವೆ. ಕಾವೇರಿ ವಿಷಯದಲ್ಲಿ ನಮಗೆ ಅನ್ಯಾಯ ಆಗಿದೆ. ರಾಜ್ಯ ಬಹಳಷ್ಟು ಹಿಂದಕ್ಕೆ ಹೋಗಿದೆ. ಯಾವಾಗಲೂ ನಮ್ಮ ರಾಜ್ಯಕಿಂತ ನೆರೆ ರಾಜ್ಯಕ್ಕೆ ಅನುಕೂಲ ಆಗುತ್ತಿದೆ. ಕನ್ನಡಿಗರಲ್ಲಿ ಒಗ್ಗಟ್ಟು ಇಲ್ಲ. ನೀರಿನ ವಿಷಯದಲ್ಲಿಯೂ ಅದೇ ಆಗುತ್ತಿದೆ. ಮೇಕೆದಾಟು ಯೋಜನೆ ಬಗ್ಗೆ ರಾಜ್ಯ ಕಾಂಗ್ರೆಸ್ ಸರಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದರು.
ತಮಿಳುನಾಡಿನ ಡಿಎಂಕೆ ಜತೆ ನಮ್ಮ ಸಂಬಂಧ ರಾಜಕೀಯಕ್ಕೆ ಮಾತ್ರ ಸೀಮಿತ. ಡಿಎಂಕೆ ಜತೆ ಮೇಕೆದಾಟು ವಿಷಯ ಮಾತನಾಡುವುದಕ್ಕೆ ರಾಜಕೀಯ ಒಪ್ಪಂದ ಮಾಡಿಕೊಂಡಿಲ್ಲ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ. ಇಲ್ಲಿ ನೋಡಿದರೆ ಮೇಕೆದಾಟು ಪಾದಯಾತ್ರೆ ಮಾಡಿ ನಮ್ಮ ನೀರು ನಮ್ಮ ಹಕ್ಕು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.
ನಮ್ಮಲ್ಲಿ ಒಗ್ಗಟ್ಟು ಬರದಿದ್ದರೆ ಕಾವೇರಿ ವಿಷಯದಲ್ಲಿ ನ್ಯಾಯ ಸಿಗಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನ ದಟ್ಟಣೆಯಿಂದ ಮುಂದೆ ಇಡೀ ಕನ್ನಂಬಾಡಿ ಕಟ್ಟೆಯ ನೀರೆಲ್ಲವನ್ನು ಕೊಟ್ಟರೂ ರಾಜಧಾನಿಗೆ ಕುಡಿಯುವ ನೀರು ಸಾಕಾಗದ ಪರಿಸ್ಥಿತಿ ಬರಬಹುದೇನೋ? ಮುಂದೆ ಈ ರೀತಿಯ ನೀರಿನ ಸಂಕಷ್ಟ ಬರುತ್ತದೆ ಎನ್ನುವ ದೂರದೃಷ್ಟಿಯಿಂದ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ನಾವು ಮುಂದಾಗಿದ್ದೇವೆ. ಮಂಡ್ಯದಲ್ಲಿ ಗೆಲ್ಲಿಸಿದರೆ ಐದು ನಿಮಿಷದಲ್ಲಿ ಯೋಜನೆಗೆ ಕೇಂದ್ರದ ಅನುಮತಿ ಕೊಡಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಈಗ ಕೊಡಿಸಲಿ ಎಂದು ಡಿಕೆ ಶಿವಕುಮಾರ್ ಹೇಳುತ್ತಿದ್ದಾರೆ. ಅದಕ್ಕಿಂತ ಮೊದಲು ಅವರು ಮಾಡಬೇಕಾದ ಕೆಲಸ ಒಂದಿದೆ, ಅವರ ಮಿತ್ರಪಕ್ಷವೇ ಆಡಳಿತ ನಡೆಸುತ್ತಿರುವ ತಮಿಳುನಾಡಿನ ಒಪ್ಪಿಗೆ ಕೊಡಿಸಲಿ, ಆಮೇಲೆ ನಮ್ಮ ಬಗ್ಗೆ ಮಾತನಾಡಲಿ ಎಂದು ಕೇಂದ್ರ ಸಚಿವರು ಹೇಳಿದರು.