ವಿಜಯಸಾಕ್ಷಿ ಸುದ್ದಿ, ಧಾರವಾಡ: ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರು 1911ರಲ್ಲಿ ಕಟ್ಟಿಸಿರುವ ಧಾರವಾಡ ಕೆಲಗೇರಿ ಕೆರೆ ಶತಮಾನ ಕಂಡಿದೆ. ಚರಂಡಿ ನೀರು, ಅಂತರಗAಗೆ, ಕಳೆ, ಕಸ ತೆಗೆದು ಸ್ವಚ್ಛಗೊಳಿಸಿ ಕೆರೆಯನ್ನು ಶಾಪಮುಕ್ತಗೊಳಿಸಲು ಮುಂದಿನ 20 ದಿನಗಳ ಗಡುವು ನೀಡುತ್ತೇನೆ. ಈ ಕುರಿತು ಆಗಿರುವ ಕರ್ತವ್ಯಲೋಪ ಗುರುತಿಸಿ, ಸೂಕ್ತ ತನಿಖೆ ಕೈಗೊಳ್ಳಲು ಲೋಕಾಯುಕ್ತದಿಂದ ಸ್ವಯಂ ದೂರು ದಾಖಲಿಸಲಾಗುತ್ತಿದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ತಿಳಿಸಿದರು.
ಅವರು ಧಾರವಾಡ ನಗರದ ಕೆಲಗೇರಿ ಕೆರೆಗೆ ಭೇಟಿ ನೀಡಿ, ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಉಪ ಲೋಕಾಯುಕ್ತ ನ್ಯಾಮೂರ್ತಿಗಳು ಸಾರ್ವಜನಿಕರೊಂದಿಗೆ ಸ್ವತಃ ಎರಡು ಕೀ.ಮಿ ನಡೆಯುವ ಮೂಲಕ ಕೆರೆಯ ಅವ್ಯವಸ್ಥೆ ಪರಿಶೀಲಿಸಿದರು.
ಕೆರೆ ನಿರ್ವಹಣೆ ಹಾಗೂ ಕೆರೆ ಮಾಲಿಕತ್ವ ಸೇರಿದಂತೆ ಎಲ್ಲರನ್ನು ಈ ಪ್ರಕರಣದಲ್ಲಿ ಪಾರ್ಟಿ ಮಾಡಲಾಗುತ್ತದೆ. ಕೆರೆಗೆ ಸಂಬAಧಿಸಿದ ಎಲ್ಲ ದಾಖಲೆಗಳನ್ನು ಮತ್ತು ತಾಂತ್ರಿಕ ವರದಿಯನ್ನು ಸಲ್ಲಿಸಬೇಕು. ಮಹಾನಗರಪಾಲಿಕೆಯವರು ಈಗಾಗಲೇ ರೂ. 150 ಕೋಟಿ ಮೊತ್ತದ ಪ್ರಸ್ತಾವನೆ ಸಿದ್ಧಗೊಳಿಸಿರುವದಾಗಿ ತಿಳಿಸಿದ್ದಾರೆ. ಇದನ್ನು ಸಹ ಪಡೆದುಕೊಂಡು ನೇರವಾಗಿ ರಾಜ್ಯಪಾಲರನ್ನು ಭೇಟಿ ಮಾಡಿ, ಕೆರೆ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುತ್ತೇನೆ ಎಂದು ಉಪ ಲೋಕಾಯುಕ್ತರು ತಿಳಿಸಿದರು.
ಕೆಲಗೇರಿ ಕೆರೆ ನಿರ್ವಹಣೆ ಮತ್ತು ಮಾಲಿಕತ್ವದ ವಿಚಾರದಲ್ಲಿ ಕೃಷಿ ವಿಶ್ವವಿದ್ಯಾಲಯ ಹಾಗೂ ಮಹಾನಗರಪಾಲಿಕೆಗಳು ಪರಸ್ಪರ ಬೊಟ್ಟು ತೋರಿಸಿ, ಕೆರೆ ಸ್ವಚ್ಛತೆ, ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಕೆರೆಯಲ್ಲಿ ಸಾಕಷ್ಟು ಅಂತರಗAಗೆ ಬೆಳೆದಿದೆ. ಕೆರೆ ವಾಕಿಂಗ್ ಪಾಥ್‌ನಲ್ಲಿ ಗಿಡಗಂಟಿ ಬೆಳೆದಿದೆ. ಚರಂಡಿ ನೀರು ಕೆರೆ ಸೇರುತ್ತಿದೆ. ಕೆರೆಯ ಸುತ್ತಲಿನ ಜನ ಮನೆಯ ದಿನಬಳಕೆ ತ್ಯಾಜ್ಯ, ಕಸಕಡ್ಡಿ ತಂದು ಕೆರೆಯಲ್ಲಿ ಹಾಕುತ್ತಿದ್ದಾರೆ. ಇದರ ಬಗ್ಗೆ ಯಾರೂ ಗಮನ ಹರಿಸಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ತನಿಖೆ ಕೈಗೊಳ್ಳಲು ಸೋಮೋಟೊ ಕೇಸ್ ದಾಖಲಿಸಲಾಗುತ್ತಿದೆ ಎಂದು ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ತಿಳಿಸಿದರಲ್ಲದೆ, ಮುಂದಿನ 20 ದಿನದಲ್ಲಿ ಕೆರೆ ಸ್ವಚ್ಛಗೊಳಿಸಿ, ಸುಂದರಗೊಳಿಸದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು. 20ದಿನಗಳ ನಂತರ ನಾನೇ ಕೆರೆ ನೋಡಲು ಬರುತ್ತೇನೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಇಲಾಖೆಗಳ ಸಮನ್ವಯ ಸಾಧಿಸಿ, ಕೆರೆ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಮಹಾನಗರಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ನಾಳೆಯಿಂದ ಕೆರೆ ಸ್ವಚ್ಛತಾ ಕಾರ್ಯ ಆರಂಭಿಸುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ, ಕರ್ನಾಟಕ ಲೋಕಾಯುಕ್ತ ಬೆಂಗಳೂರು ಕಚೇರಿಯಲ್ಲಿನ ವಿವರಣಾ ವಿಭಾಗದ ಅಪರ ನಿಬಂಧಕರಾದ ಪಿ.ಶ್ರೀನಿವಾಸ, ನರಸಿಂಹಸಾ ಎಂ.ವಿ., ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ, ಸಿವಿಲ್ ನ್ಯಾಯಾಧೀಶ ಕಿರಣ ಪಿ.ಎಂ.ಪಾಟೀಲ್, ಧಾರವಾಡ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನುಮಂತರಾಯ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.