HomeDharwadಧರ್ಮದಿಂದ ವಿಮುಖನಾದರೆ ಅವನತಿ ನಿಶ್ಚಿತ

ಧರ್ಮದಿಂದ ವಿಮುಖನಾದರೆ ಅವನತಿ ನಿಶ್ಚಿತ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಕಲಘಟಗಿ: ಪ್ರಕೃತಿ ಮಾನವನನ್ನು ಸೃಷ್ಟಿಸಿದರೆ, ಸಂಸ್ಕಾರ ದೇವ ಮಾನವರನ್ನು ಸೃಷ್ಟಿಸುತ್ತದೆ. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಶಾಶ್ವತವಾಗಿವೆ. ಮನುಷ್ಯ ಧರ್ಮ ಸಂಸ್ಕೃತಿಯಿಂದ ವಿಮುಖನಾದರೆ ಅವನತಿ ನಿಶ್ಚಿತವೆಂಬುದನ್ನು ಯಾರೂ ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಗುರುವಾರ ತಾಲೂಕಿನ ಸುಕ್ಷೇತ್ರ ಯಲವಧಾಳ ಮತ್ತು ತಾವರಗೇರಿ ಗ್ರಾಮದಲ್ಲಿ ಶ್ರೀ ಗುರು ಚನ್ನವೀರೇಶ್ವರಸ್ವಾಮಿ ಮಠದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ, ಗೋಪುರ ಕಳಸಾರೋಹಣ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ಜನರಲ್ಲಿ ಜಾಗೃತಿ ಸಂಸ್ಕಾರ ಮತ್ತು ರಾಷ್ಟ್ರೀಯ ಭಾವನೆಗಳನ್ನು ಬೆಳೆಸುವ ಸಾಮರಸ್ಯ ಕೇಂದ್ರಗಳಾಗಿವೆ. ವಿಚಾರ ವಿಮರ್ಶೆಗಳು ನಮ್ಮ ಸಂಸ್ಕೃತಿಯ ಮೇಲೆ ಹೊಸ ಬೆಳಕು ಮೂಡಿಸಬೇಕೇ ಹೊರತು ಜನರನ್ನು ನಾಸ್ತಿಕರನ್ನಾಗಿ ಮಾಡಬಾರದು. ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಭಾವನೆಗಳನ್ನು ಬೆಸೆಯುವ ಕೆಲಸವಾಗಬೇಕಾಗಿದೆ. ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಒಂದಿಷ್ಟಾದರೂ ಶಿವಜ್ಞಾನದ ಅರಿವು ಇರಬೇಕಾಗುತ್ತದೆ. ಪ್ರತಿಯೊಬ್ಬರಲ್ಲಿ ಸಮಯ ಪಾಲನೆ, ನಿಯಮ ಪಾಲನೆ ಮತ್ತು ಸಂಯಮ ಬೆಳೆದುಕೊಂಡು ಬರುವ ಅವಶ್ಯಕತೆಯನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ನಿರೂಪಿಸಿದ್ದಾರೆ. ಸಂತೃಪ್ತಿ-ಸಮೃದ್ಧಿಗಾಗಿ ಧರ್ಮಾಚರಣೆ ಮಾಡಬೇಕೆಂದು ಶ್ರೀ ರಂಭಾಪುರಿ ಜಗದ್ಗುರುಗಳು ನುಡಿದರು.

ನೇತೃತ್ವ ವಹಿಸಿದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಮಾತನಾಡಿ, ಮಾತಿಗೆ ತೂಕ ಬರುವುದು ಸತ್ಯದಿಂದಲ್ಲದೇ ಅಸತ್ಯದಿಂದಲ್ಲ. ಮಾತಿಗೆ ಮೌಲ್ಯ ಬರಬೇಕಾದರೆ ಆಡುವ ಮಾತಿನಲ್ಲಿ ಹಿತಮಿತ ಇರಬೇಕು. ಮಾನವನ ಉಸಿರಾಟಕ್ಕೆ ಗಾಳಿ ಎಷ್ಟು ಮುಖ್ಯವೋ ಜೀವನದ ಉಜ್ವಲ ಭವಿಷ್ಯಕ್ಕೆ ಮಹಾತ್ಮರ ಸಂದೇಶಗಳೂ ಅಷ್ಟೇ ಮುಖ್ಯವಾಗಿವೆ ಎಂದರು.

ಎಂ.ಚಂದರಗಿ ಹಿರೇಮಠದ ವೀರಭದ್ರ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿ, ಮಾನವನ ಜೀವನದ ಉನ್ನತಿ ಮತ್ತು ಶ್ರೇಯಸ್ಸಿಗೆ ಧರ್ಮವೇ ಮೂಲ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾನವ ಜೀವನದ ವಿಕಾಸಕ್ಕಾಗಿ ಬೋಧಿಸಿದ ತತ್ವ ಸಿದ್ಧಾಂತಗಳು ಸಕಲರ ಬಾಳಿನಲ್ಲಿ ಬೆಳಕನ್ನು ತೋರಿವೆ ಎಂದರು.

ಸಮಾರಂಭದಲ್ಲಿ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ, ಬಸಯ್ಯ ಹಿರೇಮಠ, ಚರಂತಯ್ಯ ಹಿರೇಮಠ, ಗ್ರಾ.ಪಂ ಅಧ್ಯಕ್ಷೆ ಅನಸವ್ವ ಕಾಮಧೇನು, ಶ್ರೀ ಚನ್ನವೀರೇಶ್ವರ ಟ್ರಸ್ಟ್ ಕಮಿಟಿ ಸದಸ್ಯರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.

ಶಿರಕೋಳದ ಗುರುಸಿದ್ಧೇಶ್ವರ ಶ್ರೀಗಳು, ಸುಳ್ಳದ ಶಿವಸಿದ್ಧರಾಮೇಶ್ವರ ಶ್ರೀಗಳು, ಮುತ್ನಾಳ ಶಿವಾನಂದ ಶ್ರೀಗಳು, ಬ್ಯಾಹಟ್ಟಿ ಮರುಳಸಿದ್ಧ ಶ್ರೀಗಳು, ಮೊರಬ ಮಹೇಶ್ವರ ಶ್ರೀಗಳು, ಕಲಘಟಗಿ ಅಭಿನವ ಮಡಿವಾಳ ಶ್ರೀಗಳು, ಬೆಲವಂತರ ರೇವಣಸಿದ್ಧಯ್ಯ ಸ್ವಾಮಿಗಳು, ಸಿದ್ಧಾರೂಢ ಮಠದ ನಿರ್ಗುಣಾನಂದ ಶ್ರೀಗಳವರು ಉಪಸ್ಥಿತರಿದ್ದು ಶ್ರೀ ಜಗದ್ಗುರುಗಳಿಂದ ಆಶೀರ್ವಾದ ಪಡೆದರು. ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ನಾಲ್ಕು ದಿನಗಳ ಕಾಲ ನಡೆಸಿಕೊಂಡು ಬಂದ ಆಧ್ಯಾತ್ಮಿಕ ಪ್ರವಚನವನ್ನು ಇದೇ ಸಂದರ್ಭದಲ್ಲಿ ಮುಕ್ತಾಯಗೊಳಿಸಿದರು.

ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಣೆ ಮಾಡಿದರು. ಜಾನಪದ ಕಲಾವಿದ ಎಮ್.ಆರ್. ತೋಟಗಂಟಿ ಸಂಗಡಿಗರಿಂದ ಭಕ್ತಿ ಗೀತೆ ಜರುಗಿತು.

ಅಧ್ಯಕ್ಷತೆ ವಹಿಸಿದ ಹನ್ನೆರಡುಮಠದ ರೇವಣಸಿದ್ಧ ಶಿವಾಚಾರ್ಯರು ಮಾತನಾಡಿ, ಮನುಷ್ಯ ಹಣ ಕಳೆದುಕೊಂಡು ಬದುಕಬಹುದು. ಆದರೆ ಗುಣ ಕಳೆದುಕೊಂಡು ಬಾಳಬಾರದು. ಅಂತರಂಗ ಮತ್ತು ಬಹಿರಂಗ ಶುದ್ಧಿಗೊಳಿಸುವ ಶಕ್ತಿ ಶ್ರೀ ಗುರುವಿಗೆ ಮಾತ್ರ ಇದೆ. ಗುರು ಬೋಧಾಮೃತವನ್ನರಿತು ಬಾಳನ್ನು ಕಟ್ಟಿಕೊಳ್ಳುವುದನ್ನು ಯಾರೂ ಮರೆಯಬಾರದೆಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!