ವಿಜಯಸಾಕ್ಷಿ ಸುದ್ದಿ, ಗದಗ : ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ ವಕೀಲರ ರಾಜ್ಯಮಟ್ಟದ ವಕೀಲರ ಪರಿಷತ್ ಹೋರಾಟಕ್ಕೆ ಮಣಿದು ಸಿಎಂ ಸಿದ್ದರಾಮಯ್ಯನವರು ವಕೀಲರ ಭೇಟಿಗೆ ಅವಕಾಶ ನೀಡಿದ್ದಾರೆ.
ಬಹಿರಂಗ ಸಭೆಯಲ್ಲಿ ಸಚಿವ ವಿನಯ ಕುಲಕರ್ಣಿ ಮೂಲಕ ಮಾತನಾಡಿ, ದಿನಾಂಕ ನಿಗದಿಪಡಿಸಿದ್ದಾರೆ. ಈ ಬಾರಿ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಬೇಡಿಕೆ ಈಡೇರುವ ವಿಶ್ವಾಸವಿದೆ. ಬೇಡಿಕೆ ಈಡೇರದಿದ್ದರೆ 10 ಸಾವಿರ ಜನರರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಶನಿವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಸದರಿ ವಿಚಾರವಾಗಿ ಸ್ಥಳ ಮತ್ತು ಸಮಯ ಇನ್ನೂ ನಿಗದಿಯಾಗಿಲ್ಲ. ಈ ಬಗ್ಗೆ ಗಮನ ಹರಿಸುವಂತೆ ವಿನಯ ಕುಲಕರ್ಣಿ ಅವರಿಗೆ ವಿನಂತಿಸಲಾಗಿದೆ.
ಈ ಹಿಂದೆಯೂ ಮಾತುಕತೆಗೆ ದಿನಾಂಕ ನಿಗದಿ ಮಾಡಿ ಮತ್ತೆ ಮುಂದೂಡಿಕೆಯಾಗಿತ್ತು. ಆದರೆ ಈ ಬಾರಿ ಅವರೇ ದಿನಾಂಕ ನಿಗದಿ ಮಾಡಿರುವುದರಿಂದ ನಮ್ಮ ಬೇಡಿಕೆ ಈಡೇರುವ ವಿಶ್ವಾಸವಿದೆ. ಸಕಾರಾತ್ಮಕ ಧೋರಣೆ ಇಟ್ಟುಕೊಂಡು ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಬಗ್ಗೆ ವಕೀಲರ ವರಿಷತ್‌ನಲ್ಲಿ ಚರ್ಚೆ ನಡೆಸಲಾಗಿದೆ.
ಸಿಎಂ ಭೇಟಿ ಮಾಡುವ ನಿಯೋಗದಲ್ಲಿ ಯಾರಿರಬೇಕು, ಏನೆಲ್ಲಾ ವಿಷಯಗಳ ಬಗ್ಗೆ ಪ್ರಸ್ತಾಪಿಸಬೇಕು ಎನ್ನುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ಕಾಂತರಾಜು ಆಯೋಗ ನಡೆಸಿರುವ ಜಾತಿ ಜನಗಣತಿ ಬಗ್ಗೆ ಸಮಾಜದ ಹಲವು ಗಣ್ಯರು, ಮಠಾಧೀಶರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸರಕಾರ ಮತ್ತೊಮ್ಮೆ ಜಾತಿ ಜನಗಣತಿ ನಡೆಸಬೇಕು. ವೈಜ್ಞಾನಿಕವಾಗಿ ಮತ್ತು ನಿಖರ ದತ್ತಾಂಶಗಳನ್ನು ಒಳಗೊಂಡ ಜಾತಿ ಜನಗಣತಿಗೆ ನಮ್ಮ ಸಹಮತವಿದೆ. ಅದರಿಂದ ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮಾಜಗಳಿಗೆ ನ್ಯಾಯ ಸಿಗಲು ಸಾಧ್ಯ ಎಂದು ಜಯಮೃತ್ಯುಂಜಯ ಶ್ರೀಗಳು ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿ.ಎಲ್. ಪಾಟೀಲ, ಸಿ.ಎಚ್. ಪೊಲೀಸಪಾಟೀಲ, ಸಿ.ಎಸ್. ಕುಲಕರ್ಣಿ, ರವೀಂದ್ರ ಶಾಬಾದಿ, ಶಿವಲಿಂಗಪ್ಪ, ಸಿದ್ದನಗೌಡ ಪಾಟೀಲ, ಎಸ್.ವಿ. ಪಾಟೀಲ, ದೊಡ್ಡಬಸಪ್ಪ ಕಂಪ್ಲಿ, ಅಯ್ಯಪ್ಪ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.
ಸಮಾಜದ ಹಿರಿಯ ವಕೀಲರಾದ ಸಿ.ಎಸ್. ನೇಗಿನಹಾಳ, ಶಿವಲಿಂಗಪ್ಪ, ಆರ್.ಸಿ. ಪಾಟೀಲ, ಎಸ್.ವಿ. ಪಾಟೀಲ ಸೇರಿದಂತೆ ಆರು ಜನ ವಕೀಲರ ಹೆಸರನ್ನು ಅಂತಿಮಗೊಳಿಸಲಾಗಿದೆ. ಪ್ರದೇಶವಾರು ಆದ್ಯತೆ ನೀಡಿ ಒಟ್ಟು 10 ಜನ ವಕೀಲರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದಾರೆ. ಸಿಎಂ ಭೇಟಿಯ ದಿನ 2 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ವಕೀಲರ ಪರಿಷತ್ ಸದಸ್ಯರೆಲ್ಲರೂ ಆ ದಿನ ಬೆಂಗಳೂರಿಗೆ ಆಗಮಿಸಬೇಕು ಎಂದು ಶ್ರೀಗಳು ವಿನಂತಿಸಿದರು.



