ಬಾಗಲಕೋಟೆ:- ರಾಜ್ಯದಲ್ಲಿ ಉಪ ಚುನಾವಣೆ ಕಾವು ರಂಗೇರಿದೆ. ಅದರಂತೆ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.
ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರ ನಡೆಸಲು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ಬಾಗಲಕೋಟೆಗೆ ಆಗಮಿಸಿದರು. ಈ ವೇಳೆ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ಮಾಡಿದ್ದಾರೆ. ಈ ಎರಡೂ ಚುನಾವಣಾ ಫಲಿತಾಂಶಕ್ಕಾಗಿ ಕಾಂಗ್ರೆಸ್ ನಾಯಕರು, ವಿಧಾನಸೌಧವನ್ನು ಬಿಕೋ ಎನ್ನುವಂತೆ ಮಾಡಿ ಪ್ರಚಾರ ಮಾಡುತ್ತಿದ್ದಾರೆ. ಗ್ಯಾರಂಟಿಗಳು ಜನರಿಗೆ ತಲುಪಿದ್ದರೆ ಇಷ್ಟೊಂದು ಪ್ರಚಾರ ಮಾಡುವ ಅಗತ್ಯ ಏನು ಎಂದು ಪ್ರಶ್ನಿಸಿದರು.
ನೀವು 2018 ರಲ್ಲಿ ಬಾದಾಮಿಯಿಂದ ಕೆಲವೇ ಮತಗಳಿಂದ ಗೆದ್ದಿದ್ದೀರಿ. ಗೆದ್ದ ನಂತರ ಬಾದಾಮಿಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುತ್ತೇನೆ ಎಂದು ಭರವಸೆ ನೀಡಿದಿರಿ. ಭರವಸೆ ಮಾತ್ರ ನೀಡಿ ಯಾವುದೇ ಕೆಲಸ ಮಾಡಿಲ್ಲ ಎಂದು ಸಿದ್ದರಾಮಯ್ಯ ಅವರನ್ನು ದೂರಿದರು. ರಾಜ್ಯ ಸರ್ಕಾರ ಗ್ಯಾರಂಟಿ ಖರ್ಚಿಗಿಂತ ಸಾಲ ಹೆಚ್ಚು ಮಾಡಿದ್ದಾರೆ. ಖಜಾನೆ ತುಂಬಿಸುತ್ತೇನೆ ಎಂದು ಗ್ಯಾರಂಟಿಗೆ ಹಣ ನೀಡಿದ್ದಾರೆ. ಈ ದೇಶದ ಇತಿಹಾಸದಲ್ಲಿ ಈ ರೀತಿಯ ಬಜೆಟ್ ಯಾರೂ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.



