ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: ಒಳ್ಳೆಯವರಿಗೆ ಇರುವಷ್ಟು ಶತ್ರುಗಳು ಕೆಟ್ಟವರಿಗೆ ಇರುವುದಿಲ್ಲ. ಕೆಟ್ಟವರಿಗೆ ಇರುವಷ್ಟು ಮಿತ್ರರು ಒಳ್ಳೆಯವರಿಗೆ ಇರುವುದಿಲ್ಲ. ತುಳಿಯಲು ವೈರಿಗಳಿದ್ದರೆ, ಬೆಳೆಸುವುದಕ್ಕೆ ಭಗವಂತ ಇದ್ದೇ ಇರುತ್ತಾನೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರಾವಣ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಜೀವನದಲ್ಲಿ ಹಸಿದಾಗ ಅನ್ನ ಕೊಟ್ಟವರನ್ನು, ಸೋತಾಗ ನಮ್ಮ ಜೊತೆಗೆ ನಿಂತವರನ್ನು, ಕಷ್ಟದಲ್ಲಿದ್ದಾಗ ಸಹಾಯ ಮಾಡಿದವರನ್ನು ಎಂದಿಗೂ ಮರೆಯಬಾರದು. ಆಶೆಯನ್ನು ಬಿಟ್ಟು ಲೋಕವಿಲ್ಲ. ಆಸೆಯೆಂಬ ಸುಮಗಳ ಸುತ್ತ ಮನವೆಂಬ ಭ್ರಮರಗಳು ಸುತ್ತುತ್ತಲೇ ಇರುತ್ತವೆ. ಮೌನ ಮತ್ತು ಮುಗುಳ್ನಗೆ ಎರಡು ಶಕ್ತಿಶಾಲಿ ಸಾಧನಗಳು. ನಗುವು ಸಮಸ್ಯೆಗಳ ಪರಿಹಾರಕ್ಕೆ ದಾರಿ ತೋರಿದರೆ, ಮೌನ ಸಮಸ್ಯೆಗಳು ಸೃಷ್ಟಿಯಾಗದಂತೆ ನೋಡಿಕೊಳ್ಳುತ್ತದೆ. ಹಸಿದು ಬಂದ ಜೀವಕ್ಕೆ ಒಂದು ತುತ್ತು ಅನ್ನ ಕೊಟ್ಟರೆ ಅದೇ ದೇವರಿಗೆ ಪ್ರಸಾದ. ದುಡ್ಡು ಕೊಟ್ಟು ಎಲ್ಲಿ ಬೇಕಾದರೂ ಜಾಗ ಖರೀದಿಸಬಹುದು. ಆದರೆ ಸ್ಮಶಾನದಲ್ಲಿ ಜೀವ ಕೊಟ್ಟೇ ಜಾಗ ತೆಗೆದುಕೊಳ್ಳಬೇಕಾಗುತ್ತದೆ ಎಂಬ ಕಟು ಸತ್ಯವನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಸ್ಪಷ್ಟವಾಗಿ ನಿರೂಪಿಸಿದ್ದಾರೆ. ಮೌಲ್ಯಾಧಾರಿತ ಜೀವನ ಸಂವರ್ಧನೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಚಿಂತನೆಗಳು ಸಕಲರ ಬಾಳಿನಲ್ಲಿ ಬೆಳಕು ತುಂಬಿವೆ ಎಂದರು.
ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದಲ್ಲಿ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಜ್ಞಾನಕ್ಕಾಗಿ ಯಾರನ್ನಾದರೂ ಬೇಡು. ಆದರೆ ಅನ್ನಕ್ಕಾಗಿ ಯಾರನ್ನೂ ಬೇಡದಿರಿ. ಮುಖ ನೋಡಿ ಸ್ನೇಹ ಮಾಡುವ, ಬಟ್ಟೆ ನೋಡಿ ಗೌರವ ಕೊಡುವ, ಹಣ ನೋಡಿ ಜನರಿಂದ ಸಂಬಂಧ ಬೆಳೆಸುವವರಿಗಿಂತ ಸ್ವಲ್ಪು ದೂರದಲ್ಲಿರುವುದೇ ಒಳ್ಳೆಯದು. ದುಷ್ಟ ಶಕ್ತಿಗಳನ್ನು ದಮನ ಮಾಡಿ ಸಾತ್ವಿಕ ಶಕ್ತಿಗಳನ್ನು ಬೆಳೆಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರರಿಗೆ ಸಲ್ಲುತ್ತದೆ ಎಂದರು.
ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು, ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ಗುರುಕುಲದ ಕುಲಪತಿ ಸಿದ್ಧಲಿಂಗಯ್ಯ ಹಿರೇಮಠ ಉಪಸ್ಥಿತರಿದ್ದರು. ಬೆಂಗಳೂರಿನ ಬೀರೂರು ಶಿವಸ್ವಾಮಿ, ನಂದೀಶ ದಾಸರಹಳ್ಳಿ, ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ, ಹರಪನಹಳ್ಳಿ ಎಂ. ಕೊಟ್ರೇಶಪ್ಪ, ಬ್ಯಾಡಗಿ ರವೀಂದ್ರ, ಮಂಜುನಾಥ ಶಾಸ್ತ್ರಿಗಳು ಭಾಗವಹಿಸಿದ್ದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ವಿಠಲಾಪುರ ಹಿರೇಮಠದ ಗಂಗಾಧರಸ್ವಾಮಿ ಇವರಿಂದ ಪ್ರಾರ್ಥನಾ ಗೀತೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.
ಬೆಳಿಗ್ಗೆ ಲೋಕಕಲ್ಯಾಣಾರ್ಥವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಸಕಲ ಸದ್ಭಕ್ತರಿಗೆ ಶುಭ ಹಾರೈಸಿದರು. ಬೆಳಗಿನ ಪೂಜಾ ಸಂದರ್ಭದಲಿ ಭೂಗರ್ಭ ಸಂಜಾತ ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯರು ಬರೆದಿರುವ `ಕಾಲ ಜ್ಞಾನ’ ಭವಿಷ್ಯವಾಣಿಯ ಅಮೂಲ್ಯ ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆಗೊಳಿಸಿದರು. ಶಿಗ್ಗಾಂವಿ ತಾಲೂಕಿನ ಕಬನೂರು ಗ್ರಾಮಸ್ಥರಿಂದ ಅನ್ನ ದಾಸೋಹ ಜರುಗಿತು.