ವಿಜಯಸಾಕ್ಷಿ ಸುದ್ದಿ, ಕೊಲನಪಾಕ (ತೆಲಂಗಾಣ): ಸತ್ಯ ಮನುಷ್ಯನನ್ನು ಬದಲಿಸುತ್ತದೆ. ನಮ್ಮ ನಡೆ-ನುಡಿಗಳು ಯಾವಾಗಲೂ ಸತ್ಯದ ಪರವಾಗಿರಬೇಕು. ಕೆಲಸ ಮಾಡಲು ಮನಸ್ಸಿದ್ದರೆ ಮಾರ್ಗಗಳು ಕಾಣುತ್ತವೆ. ಮನಸ್ಸಿಲ್ಲದಿದ್ದರೆ ನೂರಾರು ನೆಪಗಳು ಮುಂದೆ ಬರುತ್ತವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಭುವನಗಿರಿ ತಾಲೂಕಿನಶ್ರೀ ಜಗದ್ಗುರು ರೇಣುಕಾಚಾರ್ಯರು ಅವತರಿಸಿದ ಕೊಲನಪಾಕ ಸ್ವಯಂಭು ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ ವಿಶೇಷ ಪೂಜಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯನ ವ್ಯಕ್ತಿತ್ವ ಗಟ್ಟಿಗೊಳಿಸುವುದಕ್ಕೆ ಹೊಗಳಿಕೆಗಿಂತಲೂ ತೆಗಳಿಕೆಯನ್ನೇ ಹೆಚ್ಚು ಗಮನಿಸಿದರೆ ಮಾಡಿದ ತಪ್ಪುಗಳು ತಿಳಿಯುತ್ತದೆ. ಯಾವುದೇ ಒಂದು ಒಳ್ಳೆಯ ಕೆಲಸ ಮಾಡುವಾಗ ತೊಡಕು-ತೊಂದರೆಗಳು ಮಹಾತ್ಮರಿಗೂ ಬಿಟ್ಟಿಲ್ಲ. ಸಂಪತ್ತಿನ ಬದುಕಿನಲ್ಲಿ ಬಾಳುವ ಮನುಷ್ಯನಿಗೆ ಗುಣವಂತರ ಗುಣಾದರ್ಶಗಳು ಕಾಣಲಾರವು. ಅನ್ಯಾಯ ಅಸತ್ಯ ಹೇಳುವ ಜನರು ಹೆಚ್ಚಿರುವಾಗ ಸತ್ಯವಂತರು ಸುಮ್ಮನಿರುವ ಕಾಲ ಇದಾಗಿದೆ ಎಂದರು.
ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಕೃತಿಯ ಬಗೆಗೆ ಉಪದೇಶಾಮೃತವನ್ನಿತ್ತರು. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು, ಮಳಲಿ ಸಂಸ್ಥಾನಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಲಿಂಗಸುಗೂರು ಮಾತಾ ಮಾಣಿಕ್ಕೇಶ್ವರಿ ಆಶ್ರಮದ ನಂದಿಕೇಶ್ವರಿ ಅಮ್ಮನವರು ಉಪಸ್ಥಿತರಿದ್ದರು.
ಈ ಪವಿತ್ರ ಸಮಾರಂಭದಲ್ಲಿ ಹೈದರಾಬಾದ ವೀರಶೈವ ಸಮಾಜದ ಅಧ್ಯಕ್ಷ ವೀರಮಲ್ಲೇಶ, ವಿಜಯಶಂಕರ, ಪಂಡಿತ ಆರ್.ಎಂ. ಪ್ರಭುಲಿಂಗಶಾಸ್ತಿçಗಳು, ಗುರುಪಾದಪ್ಪ ಕಿಣಗಿ, ಶಕುಂತಲಾ ಶಿವಶರಣಪ್ಪ ಸೀರಿ, ಸರೋಜಾ ಹಿರೇಮಠ, ಕಸ್ತೂರಮ್ಮ ಉಳ್ಳಾಗಡ್ಡಿ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಾತಃಕಾಲ ಸ್ವಯಂಭು ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ ವಿಶೇಷ ಪೂಜಾಭಿಷೇಕ, ಶಕ್ತಿಮಾತೆ ಚಂಡಿಕಾAಬಾ ದೇವಿಗೆ ಕುಂಕುಮಾರ್ಚನೆ ಹಾಗೂ ಶ್ರೀ ವೀರಭದ್ರಸ್ವಾಮಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಪೂಜೆ ಸಲ್ಲಿಸಿದರು. ಕಲಬುರ್ಗಿಯ ಗಿರಿಯಪ್ಪ ಮುತ್ಯಾ ಬಂದ ಎಲ್ಲ ಸದ್ಭಕ್ತರಿಗೂ ಅನ್ನ ದಾಸೋಹ ಸೇವೆ ಸಲ್ಲಿಸಿದರು.
ಜೀವನ ಹೂದೋಟದಲ್ಲಿ ಅರಳುವ ಹೂಗಳೆಷ್ಟೋ, ಬಾಡುವ ಹೂಗಳೆಷ್ಟೋ ಹೇಳಲಾಗದು. ಭೌತಿಕ ಸಿರಿ-ಸಂಪತ್ತು ಮನುಷ್ಯನಿಗೆ ನಿಜವಾದ ಸಂತೃಪ್ತಿ ತರಲಾರವು. ಇವುಗಳ ಜೊತೆಗೆ ಆಧ್ಯಾತ್ಮದ ಹಸಿವು ಇರಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸ್ತö್ಯರನ್ನು ನಿಮಿತ್ತ ಮಾಡಿ ಸಕಲರಿಗೂ ಬೋಧಿಸಿದ್ದಾರೆ. ಕೊಲನಪಾಕ ಸ್ವಯಂಭು ಶ್ರೀ ಸೋಮೇಶ್ವರ ಕ್ಷೇತ್ರ ಬಹಳ ಪ್ರಾಚೀನ ಇತಿಹಾಸವನ್ನು ಹೊಂದಿರುವುದಷ್ಟೇ ಅಲ್ಲ. ವೀರಶೈವ ಧರ್ಮ ಸಿದ್ಧಾಂತ ಸ್ಥಾಪಕರಾದ ಶ್ರೀ ಜಗದ್ಗುರು ರೇಣುಕಾಚಾರ್ಯರು ಆವಿರ್ಭವಿಸಿದ ಪಾವನ ಕ್ಷೇತ್ರವಾಗಿದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಅಭಿಪ್ರಾಯಪಟ್ಟರು.