ವಿಜಯಪುರ: ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಇರಲ್ಲ ಸತ್ಯನಾಶವಾಗಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ದೀಪ ಆರುವ ಮುನ್ನ ಜಾಸ್ತಿ ಉರಿಯುತ್ತಿದೆ. ಅದರಂತೆ ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಇರಲ್ಲ, ಸತ್ಯನಾಶವಾಗಲಿದೆ. ಮುಂದೊಂದು ದಿನ ದೇಶದಲ್ಲೇ ಕಾಂಗ್ರೆಸ್ ಪಕ್ಷವನ್ನು ಹುಡುಕಬೇಕಾದ ಪರಿಸ್ಥಿತಿ ಬರಲಿದೆ ಎಂದು ಟೀಕಿಸಿದರು.
ನರೇಗಾ ಯೋಜನೆಯ ಕುರಿತು ಮಾತನಾಡಿದ ಜಿಗಜಿಣಗಿ, ಹಿಂದಿನ ದಿನಗಳಲ್ಲಿ ಈ ಯೋಜನೆಗೆ ಸ್ಪಷ್ಟವಾದ ಚೌಕಟ್ಟು ಇರಲಿಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಿರಾಮ್ಜಿ ಹೆಸರಿನಲ್ಲಿ ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸುವ ಜೊತೆಗೆ ಜನರಿಗೆ ನಿಜವಾದ ಅನುಕೂಲ ಒದಗಿಸುವ ಕೆಲಸ ಮಾಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ನರೇಗಾ ಯೋಜನೆ ಸಮರ್ಥವಾಗಿ ಜಾರಿಯಲ್ಲಿದೆ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ರಾಜ್ಯ ಸರ್ಕಾರಗಳು ನರೇಗಾ ಯೋಜನೆಗೆ ಅನುದಾನ ನೀಡುವುದರಲ್ಲಿ ನಿರ್ಲಕ್ಷ್ಯ ತೋರಿಸುತ್ತಿದ್ದವು. ಈಗ 60:40 ಅನುದಾನದ ಪಾಲನ್ನು ಕಡ್ಡಾಯಗೊಳಿಸಲಾಗಿದೆ. ಅದೇ ಕಾರಣಕ್ಕೆ ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ದೂರುತ್ತಿದೆ. ಹಿಂದೆ ಯೋಜನೆಯಲ್ಲಿ ಸರಿಯಾದ ಲೆಕ್ಕಾಚಾರವಿಲ್ಲದೆ, ನಕಲಿ ಹೆಸರಿನಲ್ಲಿ ಅನುದಾನ ದುರ್ಬಳಕೆ ಆಗುತ್ತಿತ್ತು. ಈಗ ಈ ಅವ್ಯವಹಾರಗಳಿಗೆ ಕಡಿವಾಣ ಬೀಳಲಿದೆ ಎಂದು ಜಿಗಜಿಣಗಿ ಹೇಳಿದರು.



