ವಿಜಯಸಾಕ್ಷಿ ಸುದ್ದಿ, ಗದಗ: ಹಲವು ವರ್ಷಗಳ ಕಾಲ ನಿರಂತರವಾಗಿ ವಿದ್ಯಾರ್ಥಿಗಳಿಗೆ ಜ್ಞಾನದಾಸೋಹ ಮಾಡಿರುವ ಅತಿಥಿ ಉಪನ್ಯಾಸಕರ ಯುಜಿಸಿ ಹಾಗೂ ನಾನ್ ಯುಜಿಸಿ ಎಂಬ ವ್ಯತ್ಯಾಸ ಮರೆತು ಸರಕಾರ ತಕ್ಷಣವೇ ಕೌನ್ಸೆಲಿಂಗ್ ನಿಲ್ಲಿಸಬೇಕು. ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಮುಂದುವರಿಸಬೇಕು, ಉಳಿದ ಬೋಧನಾ ಕಾರ್ಯಭಾರಕ್ಕಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿ ಹೊರಗುಳಿದ ಅತಿಥಿ ಉಪನ್ಯಾಸಕರಿಗೆ ಕೌನ್ಸೆಲಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳಲು ಮುಂದಾಗಬೇಕು. ಮಾನವೀಯತೆಯ ಆಧಾರದ ಮೇಲೆ ಆದ್ಯತೆ ನೀಡಿ ಸೇವಾ ಭದ್ರತೆ ಸೇವಾ ವಿಲೀನತೆಗೆ ಮುಂದಾಗದೆ ಇದ್ದರೆ ದಯಾಮರಣಕ್ಕೂ ಸಿದ್ಧರಾಗಿದ್ದೇವೆ ಎಂದು ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ. ಹನುಮಂತಗೌಡ ಕಲ್ಮನಿ ಹೇಳಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಹಾಗೂ ಉನ್ನತ ಶಿಕ್ಷಣ ಇಲಾಖೆಯ ದ್ವಂದ್ವ ನಿಲುವುಗಳನ್ನು ಖಂಡಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಹಿರಿಯ ಉಪನ್ಯಾಸಕಿ ದೊಡ್ಡಬಸಮ್ಮ ಮಾತನಾಡಿ, 2000ರಿಂದ 20 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಾ ಬಂದಿರುವ ನನ್ನ ಕೈಯಲ್ಲಿ ಶಿಕ್ಷಣ ಪಡೆದವರು ಜಿಲ್ಲಾಧಿಕಾರಿ, ತಹಸೀಲ್ದಾರರು ಸೇರಿದಂತೆ ವಿವಿಧ ಉನ್ನತ ಹುದ್ದೆಗಳಲ್ಲಿದ್ದಾರೆ. ಮಕ್ಕಳ ಭವಿಷ್ಯ ಕಟ್ಟುತ್ತಾ ಬಂದಿರುವ ನಮ್ಮ ಮಕ್ಕಳ ಮತ್ತು ನಮ್ಮ ಭವಿಷ್ಯವೇ ಬೀದಿಗೆ ಬಂದಿದೆ. ನಮಗೂ ಅವಕಾಶ ನೀಡಿ ಸರಕಾರ ನಮ್ಮ ಬೆಂಬಲಕ್ಕೆ ನಿಲ್ಲಬೇಕು ಎಂದು ಹೇಳಿದರು.
ಮಂಗಳವಾರ ಅಪಘಾತದಲ್ಲಿ ನಿಧನರಾದ ದಕ್ಷ ಅಧಿಕಾರಿ ಮಹಾಂತೇಶ ಬೀಳಗಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮನಮೋಹನ, ಸುರೇಶ, ಅನಿಲ ಹಾರೂಗೇರಿ, ಎನ್.ಬಿ. ಬಡಿಗೇರ, ದಾನೇಶ್ವರಿ, ಪಾರ್ವತಿ ತಾರಿಹಾಳ, ಸರಸ್ವತಿ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಶಶಿಕಲಾ ಜೋಳದ, ಅಮೃತ್, ದೇಸಾಯಿಗೌಡರ, ಡಾ. ವಿ.ಡಿ. ಮುಳಗುಂದ, ಭಗತ್‌ಸಿಂಗ್ ನವಲಕೂರ, ಡಾ. ಚಂದ್ರಕಾಂತ ಶಿರೋಳೆ ಸೇರಿದಂತೆ ಬೀದರ, ಗುಲಬುರ್ಗಾ, ಕಾರವಾರ, ಧಾರವಾಡ, ಬಾಗಲಕೋಟೆ, ವಿಜಯನಗರ, ಬಳ್ಳಾರಿ, ಹಾವೇರಿ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅತಿಥಿ ಉಪನ್ಯಾಸಕರು ಮತ್ತು ಮಹಿಳಾ ಉಪನ್ಯಾಸಕರು ಇದ್ದರು.
ಬೀದರ ಜಿಲ್ಲೆಯ ಅನಿಲಕುಮಾರ ಸಿಂಧೆ ಮಾತನಾಡಿ, ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರನ್ನು ಮುಂದುರಿಸಬೇಕು. ಉಳಿದ ಬೋಧನಾ ಕಾರ್ಯಭಾರಕ್ಕೆ ಕೌನ್ಸೆಲಿಂಗ್ ನಡೆಯಲಿ. 2009ರಲ್ಲಿ ಪೂರ್ಣಗೊಳಿಸಿರುವ ಎಂ.ಫಿಲ್ ಹೊಂದಿದವರಿಗೂ ಅವಕಾಶ ನೀಡಿ ಮತ್ತು ಭದ್ರತೆಯನ್ನು ನೀಡಬೇಕೆಂದು ಹೇಳಿದರು.



