ಬೆಳಗಾವಿ: ರಾಜ್ಯದಲ್ಲಿ ಕೆರೆಗಳನ್ನು ತುಂಬಿಸಲು ವಿವಿಧ ಯೋಜನೆಗಳ ಮೂಲಕ ಸುಮಾರು 40 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ನಡೆದ ಕೆರೆ ಸಂರಕ್ಷಣೆ ಜಾಗೃತಿ ಹಾಗೂ “ನೀರಿದ್ದರೆ ನಾಳೆ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯುತ್ ಬಿಲ್ ಪಾವತಿಯಲ್ಲಿ ವಿಳಂಬವಾದರೆ ಶೇ.15ರಷ್ಟು ಬಡ್ಡಿ ಸೇರಿಸಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ಹಣ ನೀಡಬೇಕಾದ ಸ್ಥಿತಿ ಇದೆ. ಈ ವಿಷಯದ ಕುರಿತು ವಿಧಾನಸಭೆಯಲ್ಲಿ ಸ್ಪಷ್ಟ ಉತ್ತರ ನೀಡಬೇಕಿದ್ದು, ಕೆಲ ಶಾಸಕರು ಈಗಾಗಲೇ ಪ್ರಸ್ತಾವನೆ ಮುಂದಿಟ್ಟಿದ್ದಾರೆ ಎಂದು ತಿಳಿಸಿದರು.
ಪಂಪ್ ಮೂಲಕ ನೀರು ತುಂಬುವ ಕೆರೆಗಳಲ್ಲಿ ಮೀನು ಮರಿಗಳನ್ನು ಬಿಡಿಸಿ ಹರಾಜು ಮಾಡುವ ಮೂಲಕ ಬರುವ ಆದಾಯದಿಂದ ವಿದ್ಯುತ್ ಬಿಲ್ ಪಾವತಿ ಮಾಡುವ ಜೊತೆಗೆ ಕೆರೆಗಳ ನಿರ್ವಹಣೆಗೆ ಬಳಸುವ ಆಲೋಚನೆ ಇದೆ ಎಂದರು. ಸರ್ಕಾರವು ಬೋರ್‌ವೆಲ್‌ಗಳಿಗೆ ಉಚಿತ ವಿದ್ಯುತ್ ನೀಡಲು ವಾರ್ಷಿಕವಾಗಿ ಸುಮಾರು 20 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. ರೈತರು 10 ಹೆಚ್‌ಪಿ ಮೋಟರ್ ಬಳಸಿ 20 ಕಿಮೀ ದೂರಕ್ಕೂ ನೀರು ಸಾಗಿಸುತ್ತಿರುವುದು ಆತಂಕಕಾರಿ ಎಂದು ಹೇಳಿದರು.
ಹಿಂದಿನ ದಿನಗಳಲ್ಲಿ ನೀರಾವರಿ ಸಚಿವರಾಗಿದ್ದ ಎಚ್.ಕೆ. ಪಾಟೀಲ್ ಅವರು ಕೆರೆ ನೀರು ಬಳಕೆದಾರರ ಸಂಘಗಳಿಗೆ ಬಲ ನೀಡಿದ್ದರು. ಮಧ್ಯದಲ್ಲಿ ಅದು ಸ್ಥಗಿತಗೊಂಡಿದ್ದು, ಇದೀಗ ಬೋಸರಾಜು ಅವರೊಂದಿಗೆ ಸೇರಿ ಮತ್ತೆ ಹೊಸ ರೂಪ ನೀಡಲಾಗಿದೆ. ಕೆರೆ ನೀರು ಬಳಕೆದಾರರ ಸಂಘಗಳಿಗೆ ಆರ್ಥಿಕ ಶಕ್ತಿ ನೀಡಬೇಕು. ನರೇಗಾ ಸೇರಿದಂತೆ ವಿವಿಧ ಯೋಜನೆಗಳಡಿ ಹೂಳು ತೆಗೆಯುವ ಹಾಗೂ ಒತ್ತುವರಿ ತೆರವು ಕಾರ್ಯಗಳನ್ನು ಜಿಲ್ಲಾಡಳಿತ ಮತ್ತು ಸಣ್ಣ ನೀರಾವರಿ ಇಲಾಖೆ ಕೈಗೊಂಡಿವೆ ಎಂದರು.
ರಾಜ್ಯದಲ್ಲಿ ಸುಮಾರು 30 ಲಕ್ಷ ಬೋರ್‌ವೆಲ್‌ಗಳು ಇದ್ದು, ಇದು ಅಂತರ್ಜಲ ಮಟ್ಟಕ್ಕೆ ಗಂಭೀರ ಹೊಡೆತ ನೀಡುತ್ತಿದೆ. ಇದನ್ನು ತಡೆಗಟ್ಟಲು ಕೆರೆಗಳನ್ನು ತುಂಬಿಸಿ ರಕ್ಷಿಸುವುದು ಅಗತ್ಯ. ಕೆರೆಗಳ ರಕ್ಷಣೆಗೆ ಬಳಕೆದಾರರ ಸಂಘಗಳು ಸಲ್ಲಿಸಿದ ಮನವಿಗಳನ್ನು ಪರಿಗಣಿಸಿ ಅನುದಾನ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು.
ಕೆರೆ ನೀರಿನಲ್ಲಿ ತೇಲುವ ಸೌರ ವಿದ್ಯುತ್ ಘಟಕ ಸ್ಥಾಪನೆಯ ಯೋಚನೆ ಇದ್ದರೂ ಅದು ಸುಲಭದ ಕೆಲಸವಲ್ಲ. ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಎಲ್ಲ ಇಲಾಖೆಗಳಿಗೆ ಸೇರಿದ ಕೆರೆಗಳನ್ನು ಸಮಗ್ರವಾಗಿ ಸಂರಕ್ಷಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಕಾಲುವೆಗಳ ಕೊನೆ ಭಾಗಗಳಿಗೆ ನೀರು ತಲುಪದ ಸಮಸ್ಯೆ ನಿವಾರಣೆಗೆ ಹೊಸ ಕಾನೂನು ತರಲಾಗಿದೆ ಎಂದು ಹೇಳಿದ ಡಿಕೆಶಿ, ಎತ್ತಿನಹೊಳೆ ಯೋಜನೆ ಮೂಲಕ ಬಯಲುಸೀಮೆಗೆ ನೀರು ತರಲಾಗುತ್ತಿದ್ದು ಇದಕ್ಕೆ ಈಗಾಗಲೇ 20 ಸಾವಿರ ಕೋಟಿ ರೂ. ವೆಚ್ಚವಾಗಿದೆ ಎಂದರು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗದ ಜನರಿಗೆ ನೀರಿನ ಮಹತ್ವ ಹೆಚ್ಚು ತಿಳಿದಿದೆ ಎಂದು ಅವರು ಹೇಳಿದರು.



