ಕೂದಲು ಉದುರುವ ಸಮಸ್ಯೆ ಇವತ್ತಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಕಂಡು ಬರುತ್ತಿದೆ. ಒಡೆದ ಕೂದಲು, ಒಣ ಹೇರ್ ಹಲವರಲ್ಲಿ ಕಂಡು ಬರುವ ಸಮಸ್ಯೆ. ಕೂದಲು ಉದುರುವ ಸಮಸ್ಯೆ ದೊಡ್ಡವರು, ಮಕ್ಕಳು, ವಯಸ್ಕರು ಎಲ್ಲರನ್ನೂ ಕಾಡುತ್ತಿದೆ.
ಕೂದಲು ಹೆಚ್ಚಾಗಿ ಉದುರುವುದು ತಲೆ ಬಾಚುವಾಗ ಹಾಗೂ ಸ್ನಾನ ಮಾಡುವಾಗ. ಸಾಮಾನ್ಯವಾಗಿ ಕೂದಲು ಉದುರುವುದಕ್ಕೆ ಅನೇಕ ಕಾರಣಗಳಿರಬಹುದು, ಅವುಗಳಲ್ಲಿ ಮನೆ ಬದಲಿಸುವುದು ಕೂಡ ಸೇರಿಕೊಳ್ಳುತ್ತದೆ. ಅಂದರೆ ಒಂದು ಸ್ಥಳದಿಂದ ಮೊತ್ತೊಂದು ಸ್ಥಳಕ್ಕೆ ಹೋದಾಗ ನೀರು ಬದಲಾಗುತ್ತದೆ. ಹಾಗಾಗಿ ನಾವು ಇರುವಲ್ಲಿ ಸ್ನಾನಕ್ಕೆ ಬಳಸುವ ನೀರು ಕೂಡ ಕೂದಲು ಉದುರುವುದಕ್ಕೆ ಮುಖ್ಯ ಕಾರಣವಾಗಿರಬಹುದು. ಅಂದರೆ ನೀವು ಇತ್ತೀಚಿಗೆ ಹೊಸ ನಗರವೊಂದಕ್ಕೆ ಸ್ಥಳಾಂತರಗೊಂಡಿದ್ದು ನಿಮಗೆ ಕೂದಲು ಉದುರುವ ಸಮಸ್ಯೆ ಪ್ರಾರಂಭವಾಗಿದ್ದರೆ, ಅದು ನೀರಿನ ಬದಲಾವಣೆಯಿಂದಾಗಿರಬಹುದು. ಇದರ ಬಗ್ಗೆ ವಿವರವಾಗಿ ತಿಳಿದುಕೊಳ್ಳಿ.
ಹಾಗಾದರೆ ಈ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳುವುದು ಹೇಗೆ? ಇದು ನಿಜವೇ? ನೀರು ಬದಲಾದರೆ ಕೂದಲು ಉದುರುತ್ತದೆಯೇ? ಈ ಎಲ್ಲಾ ಪ್ರಶ್ನೆಗೆ ಉತ್ತರ ಇಲ್ಲಿದೆ.
ತಜ್ಞರ ಪ್ರಕಾರ, ಕೂದಲು ಉದುರುವುದು ನೀರಿನ ಬದಲಾವಣೆಯಿಂದಲ್ಲ, ಆದರೆ ಅದರ ಕಳಪೆ ಗುಣಮಟ್ಟದಿಂದ. ಏಕೆಂದರೆ ನೀರು ಚೆನ್ನಾಗಿಲ್ಲದಿದ್ದರೆ ಅಥವಾ ಗುಣಮಟ್ಟ ಸರಿಯಾಗಿ ಇಲ್ಲದಿದ್ದರೆ ಆಗ ಅದರಿಂದ ಕೂದಲು ಉದುರುವುದು ಅಥವಾ ತೆಳ್ಳಗಾಗುವ ಸಮಸ್ಯೆಗೆ ಕಾರಣವಾಗಬಹುದು. ನೀರಿನಲ್ಲಿ ಹೆಚ್ಚು ಕ್ಲೋರಿನ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಕಠಿಣ ಲೋಹ ಅಥವಾ ಕೊಳಕು ಇದ್ದರೆ, ಅದು ಕೂದಲು ಮತ್ತು ನೆತ್ತಿಯನ್ನು ಹಾನಿಗೊಳಿಸುತ್ತದೆ. ಅಂತಹ ನೀರಿನಿಂದ ಕೂದಲನ್ನು ತೊಳೆದರೆ ನೆತ್ತಿಯಲ್ಲಿರುವ ತೇವಾಂಶ ಹೋಗಿ ಕೂದಲು ಒಣಗುತ್ತದೆ. ಅಲ್ಲದೆ ಇದರಿಂದ ಕೂದಲು ದುರ್ಬಲಗೊಂಡು ಒಡೆಯಲು ಕಾರಣವಾಗುತ್ತದೆ. ಅಲ್ಲದೆ, ಇದು ಕೂದಲಿನ ನೈಸರ್ಗಿಕ ತೇವಾಂಶವನ್ನು ಕೂಡ ತೆಗೆಯುತ್ತದೆ. ಹಾಗಾದರೆ ಇದನ್ನು ಯಾವ ರೀತಿ ತಡೆಗಟ್ಟಬೇಕು? ಪದೇ ಪದೇ ಮನೆ ಬದಲಿಸುವವರು ಯಾವ ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.
ತಡೆಗಟ್ಟಲು ಹೀಗೆ ಮಾಡಿ;
ನೀರನ್ನು ಶುದ್ಧೀಕರಿಸಲು ಫಿಲ್ಟರ್ ಬಳಸಿ. ಇದು ನೀರಿನ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಕೂದಲಿಗೆ ಹಾನಿ ಮಾಡುವುದಿಲ್ಲ.
ಕೂದಲಿನ ತೇವಾಂಶವನ್ನು ಕಾಪಾಡಿಕೊಳ್ಳಲು ಮಾಯಿಶ್ಚರೈಸರ್ ಗಳೊಂದಿಗೆ ಶಾಂಪೂ ಮತ್ತು ಕಂಡೀಷನರ್ ಗಳನ್ನು ಬಳಸಿ. ಇದು ಕೂದಲು ಒಣಗುವುದನ್ನು ತಡೆಯುತ್ತದೆ.
ವಾರಕ್ಕೊಮ್ಮೆ ತೆಂಗಿನಕಾಯಿ, ಆಮ್ಲಾ ಅಥವಾ ಬಾದಾಮಿ ಎಣ್ಣೆಯಿಂದ ನೆತ್ತಿಯನ್ನು ಮಸಾಜ್ ಮಾಡಿ. ಈ ರೀತಿ ಮಾಡುವುದರಿಂದ, ಕೂದಲಿನ ಬೇರುಗಳು ಬಲಗೊಳ್ಳುತ್ತವೆ ಮತ್ತು ನೆತ್ತಿಯ ತೇವಾಂಶವು ಉಳಿಯುತ್ತದೆ.
ಕೂದಲಿನ ಆರೋಗ್ಯಕ್ಕಾಗಿ, ನಿಮ್ಮ ಆಹಾರದಲ್ಲಿ ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜ ಸಮೃದ್ಧ ಆಹಾರಗಳನ್ನು ಸೇರಿಸಿ.