ಮೋದಿಯವರೇ ನಿಮ್ಮ ಆರೋಪ ಸಾಬೀತು ಪಡಿಸಿದ್ರೆ ನಾನು ರಾಜಕೀಯ ನಿವೃತ್ತಿ: ಇಲ್ಲದಿದ್ರೆ ನೀವು ನಿವೃತ್ತಿ ಘೋಷಿಸ್ತೀರಾ: ಸಿಎಂ ಸವಾಲು

0
Spread the love

ಮೈಸೂರು: ಬಿಜೆಪಿಯವರ ಮೇಲೆ ಅನೇಕ ಆರೋಪಗಳಿವೆ. ಕರೋನಾ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಅವ್ಯವಹಾರಗಳ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಡಿ.ಕುನ್ಹಾ ಆಯೋಗ ವರದಿ ಸಲ್ಲಿಸಿದ್ದು, 330 ರೂಪಾಯಿಗೆ ಸಿಗುವ ಪಿಪಿಇ ಕಿಟ್ ನ್ನು 2140 ರೂಪಾಯಿಗಳಿಗೆ ಖರೀದಿ ಮಾಡಿದ್ದಾರೆ.

Advertisement

ಇದಕ್ಕೆ ನರೇಂದ್ರ ಮೋದಿ ಏನು ಹೇಳುತ್ತಾರೆ? ಭ್ರಷ್ಟಾಚಾರ ಮಾ ಡಿರುವುದು ಅವರ ಸರ್ಕಾರ ನಮ್ಮ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರವಾಗಿಲ್ಲ.ಭ್ರಷ್ಟಾಚಾರ ಮಾಡುವುದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿಗಳು ಕಾಂಗ್ರೆಸ್ ಪಕ್ಷ ಹಗಲು ದರೋಡೆ ಮಾಡುತ್ತಿದೆ. ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ ಎಂದಿರುವ ಬಗ್ಗೆ ಮಾಧ್ಯಮದವರಿಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.

ವಸೂಲಿ ಮಾಡಿರುವುದನ್ನು ನಿರೂಪಿಸಿದರೆ ನಾನು ರಾಜಕೀಯ ನಿವೃತ್ತಿ

ನರೇಂದ್ರ ಮೋದಿ ಅವರು ಅಬಕಾರಿ ಇಲಾಖೆಯಲ್ಲಿ 700 ಕೋಟಿ ವಸೂಲಿ ಮಾಡಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಒಂದೇ ಒಂದು ರೂಪಾಯಿ ವಸೂಲಿ ಮಾಡಿರುವುದನ್ನು ನಿರೂಪಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು. ಅವರು ಪ್ರಧಾನ ಮಂತ್ರಿ ಸ್ಥಾನ ನೀಡಲು ಸಿದ್ಧರಿದ್ದಾರೆಯೇ ? ಸುಳ್ಳು ಹೇಳಲು ಇತಿಮಿತಿ ಇರಬೇಕು ಎಂದರು.ಉಪಚುನಾವಣೆ: ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರು ಗೆಲ್ಲಲಿದೆ ಇಂದು ಮತದಾನ ನಡೆಯುತ್ತಿರುವ ಮೂರೂ ಕ್ಷೇತ್ರಗಳಲ್ಲಿ ಜನಸ್ಪಂದನೆ ನೋಡಿದರೆ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರು ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಬಂಡೀಪುರದಲ್ಲಿ ರಾತ್ರಿ ಸಂಚಾರ ಪ್ರಾರಂಭಿಸುವ ಬಗ್ಗೆ ಚರ್ಚೆ;ಪ್ರಸ್ತಾವನೆ ಇಲ್ಲ

ಬಂಡೀಪುರದಲ್ಲಿ ರಾತ್ರಿ ಸಂಚಾರ ಪುನ: ಪ್ರಾರಂಭಿಸುವ ಬಗ್ಗೆ ಚರ್ಚೆಯಾಗಿಲ್ಲ. ಸರ್ಕಾರದ ಮುಂದೆ ಈ ಕುರಿತ ಪ್ರಸ್ತಾವನೆ ಇಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಈ ಬಗ್ಗೆ ತಿಳಿಸಿರುವುದಾಗಿ ಸುದ್ದಿಗಾರರು ತಿಳಿಸಿದಾಗ ಈ ಬಗ್ಗೆ ಅವರನ್ನೇ ಕೇಳಿ. ನನಗೆ ತಿಳಿದ ಮಟ್ಟಿಗೆ ಸರ್ಕಾರದ ಮುಂದೆ ಪ್ರಸ್ತಾವನೆ ಇಲ್ಲ ಎಂದರು.

ಸಚಿವ ಸಂಪುಟಕ್ಕೆ ನಾಗೇಂದ್ರ: ಚುನಾವಣೆ ಮುಗಿದ ಮೇಲೆ ಪರಿಶೀಲನೆ ಮಾಡುವ ಭರವಸೆ ಮಾಜಿ ಸಚಿವ ನಾಗೇಂದ್ರ ಅವರನ್ನು ಸಚಿವ ಸಂಪುಟಕ್ಕೆ ಪುನ: ಸೇರ್ಪಡೆಗೊಳ್ಳಿಸಲಾಗುವುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಈ ಬಗ್ಗೆ ನಿನ್ನೆ ಕೇಳಿದ್ದಾರೆ. ಚುನಾವಣೆ ಮುಗಿದ ಮೇಲೆ ಪರಿಶೀಲನೆ ಮಾಡೋಣ ಎಂದು ಹೇಳಿದ್ದೇನೆ ಎಂದರು.

ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರನ್ನು ಗುರಿಯಾಗಿಸಿ ಪ್ರಧಾನಿ ಟೀಕೆ

ಪ್ರಧಾನಿ ಮೋದಿಯವರು ಚುನಾವಣಾ ಪ್ರಚಾರ ಸಭೆಗಳಲ್ಲಿ ಕರ್ನಾಟಕವನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕರ್ನಾಟಕ ದೊಡ್ಡ ರಾಜ್ಯವಾಗಿದ್ದು, ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಪಡೆದಿರುವುದರಿಂದ , ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಪ್ರಧಾನಿಯವರು ಗುರಿಯಾಗಿಸಿ ಟೀಕೆ ಮಾಡುತ್ತಿದ್ದಾರೆ ಎಂದರು.

ಸುಳ್ಳು ಆರೋಪಗಳ ಮೇಲೆ ಇಡಿ ತನಿಖೆ

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಯಿಸಿ, ಇಡಿಯವರು ಕಾನೂನು ಪ್ರಕಾರ ಮಾಡುವ ತನಿಖೆ ನಡೆಸಲಿ , ಅದಕ್ಕೆ ಯಾವುದೇ ರೀತಿಯ ಪ್ರತಿರೋಧವನ್ನು ನಾವು ಒಡ್ಡುವುದಿಲ್ಲ. ಇಡಿ ತನಿಖೆ ನಿಷ್ಪಪಕ್ಷಪಾತವಾಗಿ ನಡೆಯುತ್ತಿದೆಯೇ ಇಲ್ಲವೇ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಸುಳ್ಳು ಆರೋಪಗಳ ಮೇಲೆ ತನಿಖೆ ನಡೆಯುತ್ತಿದೆ ಎಂಬುದಷ್ಟೇ ಹೇಳಬಲ್ಲೇ ಎಂದರು.

ಸಿದ್ದರಾಮಯ್ಯನ ಸೊಕ್ಕು ಮುರಿಯುತ್ತೇವೆ’ ಎಂದಿರುವುದು ಸರಿಯೇ?

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಬಗ್ಗೆ ಸಚಿವ ಜಮೀರ್ ಅಹ್ಮದ್ ಅವರ ಹೇಳಿಕೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಮಾಜಿ ಪ್ರಧಾನಿ ದೇವೇಗೌಡರು ‘ಸಿದ್ದರಾಮಯ್ಯನ ಸೊಕ್ಕು ಮುರಿಯುತ್ತೇವೆ’ ಎಂದಿರುವುದು ಎಷ್ಟರ ಮಟ್ಟಿಗೆ ಸರಿ ? ಓರ್ವ ಮುಖ್ಯಮಂತ್ರಿಗೆ ಈ ರೀತಿ ಹೇಳುವುದು ಸರಿಯೇ ಎಂದು ಪ್ರಶ್ನಿಸಿ, ಜಮೀರ್ ಅಹ್ಮದ್ ಹಾಗೂ ಕುಮಾರಸ್ವಾಮಿಯವರು ಒಂದು ಕಾಲದಲ್ಲಿ ಆಪ್ತರಾಗಿದ್ದರು. ಆದರೆ ಪ್ರಸ್ತುತ ಅವರ ನಡುವಿನ ಸಂಬಂಧ ಹೇಗಿದೆ ಎಂಬ ಬಗ್ಗೆ ನನಗೆ ತಿಳಿದಿಲ್ಲ ಎಂದರು.

ಬಿಜೆಪಿಗೆ ಕೋಮುಗಳ ನಡುವೆ ಬೆಂಕಿ ಹಚ್ಚುವುದೇ ಕೆಲಸ

ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಬಗ್ಗೆ ಹಾಗೂ ಈ ಬಗ್ಗೆ ಬಿಜೆಪಿ ಟೀಕಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಗುತ್ತಿಗೆಗಳಲ್ಲಿ ಮೀಸಲಾತಿ ನೀಡಿರುವಂತೆ ಮುಸ್ಲಿಮರಿಗೂ ಮೀಸಲಾತಿ ನೀಡಿ ಎಂದು ಬೇಡಿಕೆಯಿಟ್ಟಿದ್ದಾರೆ. ಆದರೆ ಈ ಬಗ್ಗೆ ಯಾವುದೇ ತೀರ್ಮಾನ ಸರ್ಕಾರ ತೆಗೆದುಕೊಂಡಿಲ್ಲ. ಬಿಜೆಪಿಯವರಿಗೆ ಕೋಮುವಾದವನ್ನು ಸೃಷ್ಟಿಸುವುದೇ ಕಾಯಕವಾಗಿದೆ. ಕೋಮುಗಳ ನಡುವೆ ಬೆಂಕಿ ಹಚ್ಚುವ ಕೆಲಸದಲ್ಲಿ ಅವರು ನಿರತರಾಗಿದ್ದಾರೆ. ಬಿಜೆಪಿಯವರೆಂದೂ ಸಮಾಜದಲ್ಲಿ ಶಾಂತಿ, ಸೋದರತ್ವ ನೆಲೆಸಬೇಕೆಂದು ಬಯಸಿದವರೇ ಅಲ್ಲ ಎಂದರು.


Spread the love

LEAVE A REPLY

Please enter your comment!
Please enter your name here