ವಿಜಯಸಾಕ್ಷಿ ಸುದ್ದಿ, ತುಮಕೂರು: ಆಧುನಿಕ ಕಾಲದಲ್ಲಿ ಮನುಷ್ಯ ಯಂತ್ರದAತೆ ಕೆಲಸ ಮಾಡಿದರೂ ಬದುಕಿನಲ್ಲಿ ಶಾಂತಿ, ನೆಮ್ಮದಿಯಿಲ್ಲ. ಬಾಳಿನ ಭಾಗ್ಯೋದಯಕ್ಕೆ ಆಧ್ಯಾತ್ಮಿಕ ಚಿಂತನಗಳು ಅವಶ್ಯಕ. ಧರ್ಮ ದೀಪದ ಬೆಳಕಿನಿಂದ ಮನುಷ್ಯನ ಅಜ್ಞಾನ ದೂರವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಶ್ರೀ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ ನ ಆಶ್ರಯದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಧನುರ್ಮಾಸದ ಇಷ್ಟಲಿಂಗ ಮಹಾಪೂಜಾ ಅಂಗವಾಗಿ ಜರುಗಿದ ೨ನೇ ದಿನದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯ ಜೀವನದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿಕೊಳ್ಳದಿದ್ದರೆ ಜೀವನ ನಿರರ್ಥಕ. ಭೌತಿಕ ಸಂಪನ್ಮೂಲಗಳಾಗಲಿ ಸಿರಿ ಸಂಪತ್ತಿನ ಸಂಗ್ರಹಗಳಾಗಲಿ ಮನುಷ್ಯನಿಗೆ ಸಂತೃಪ್ತಿ ತಂದು ಕೊಡಲಾರವು. ಅದರೊಂದಿಗೆ ಒಂದಿಷ್ಟಾದರೂ ಆಧ್ಯಾತ್ಮಿಕ ತಿಳುವಳಿಕೆ ಮುಖ್ಯ. ಯಾವ ಸಂಪತ್ತಿಗಾಗಿ ಈ ಜೀವ ಜಗತ್ತು ಬದುಕುತ್ತಿದೆಯೋ ಆ ಸಂಪತ್ತಿನ ಪ್ರಾಪ್ತಿಗಾಗಿ ಶ್ರಮಿಸಬೇಕಾಗುತ್ತದೆ. ಮಲಿನಗೊಂಡ ಮನಸ್ಸಿಗೆ ಶಿವಜ್ಞಾನದ ಅರಿವು ಮೂಡಿಸಿ ಜಾಗೃತಗೊಳಿಸುವ ಶಕ್ತಿ ಶ್ರೀ ಗುರುವಿಗೆ ಇದೆ. ಹೃದಯ ಹೃದ್ಭೂಮಿಯನ್ನು ಕೃಷಿಗೈದು ಸಂಸ್ಕಾರ, ಸಚ್ಚಾರಿತ್ರ್ಯದಿಂದ ಬದುಕನ್ನು ಶ್ರೀಮಂತಗೊಳಿಸುವ ಅದ್ಭುತ ಶಕ್ತಿ ಗುರುವಿನಲ್ಲಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಗುರು ಹಿರಿಮೆಯನ್ನು ಕೊಂಡಾಡಿದ್ದಾರೆ ಎಂದರು.
ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮಿಗಳು ಮಾತನಾಡಿ, ವ್ಯಕ್ತಿತ್ವ ವಿಕಾಸಕ್ಕೆ ಧರ್ಮ-ಆಧ್ಯಾತ್ಮಗಳ ಕೊಡುಗೆ ಅಪಾರ. ಭೌತಿಕ ಸಂಪತ್ತು ಶಾಶ್ವತವಲ್ಲ. ಆಧ್ಯಾತ್ಮದ ಸಂಪತ್ತೇ ನಿಜವಾದ ಸಂಪತ್ತು. ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಬಸವಾದಿ ಶಿವಶರಣರ ವಿಚಾರ ಧಾರೆಗಳು ಬದುಕಿ ಬಾಳುವ ಜನಾಂಗಕ್ಕೆ ಆಶಾಕಿರಣವೆಂದರು.
ಸಮಾರಂಭದ ನೇತೃತ್ವ ವಹಿಸಿದ ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿ, ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಇಂಥ ಧಾರ್ಮಿಕ ಸಮಾರಂಭಗಳು ಅವಶ್ಯಕ. ಶ್ರೀ ರಂಭಾಪುರಿ ಜಗದ್ಗುರುಗಳ ಧರ್ಮ ಜಾಗೃತಿ ಅಭಿಯಾನ ನಿರಂತರ ಜರುಗುತ್ತಿರುವುದು ಭಕ್ತರ ಸೌಭಾಗ್ಯವೆಂದರು. ಬಿಳಿಕಿ ರಾಚೋಟೇಶ್ವರ ಶ್ರೀಗಳು, ಬೀರೂರು ರುದ್ರಮುನಿ ಶ್ರೀಗಳು, ಮಾದಿಹಳ್ಳಿ ಚನ್ನಮಲ್ಲಿಕಾರ್ಜುನ ಶ್ರೀಗಳು ಉಪಸ್ಥಿತರಿದ್ದರು.
ಶಾಸಕ ಜಿ.ಬಿ. ಜೋತಿಗಣೇಶ, ಅಂಬಿಕಾ ಹುಲಿನಾಯ್ಕರ್, ಟಿ.ಸಿ. ಓಹಿಲೇಶ್ವರ, ಶಶಿ ಹುಲಿಕುಂಟೆಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಎನ್.ಆರ್. ವಿಶ್ವಾರಾಧ್ಯರು, ಸಿ.ಎಸ್. ಬಸವರಾಜಯ್ಯ, ಹೆಚ್.ಎನ್. ಚಂದ್ರಶೇಖರ, ಡಿ.ಜಗದೀಶ, ಕೆ.ಎಸ್. ದರ್ಶನ ಮೊದಲಾದ ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.
ಕಾರ್ಯದರ್ಶಿ ಹೆಚ್.ಎಸ್. ಭಸ್ಮಾಗಿ ರುದ್ರಯ್ಯನವರು ಸ್ವಾಗತಿಸಿದರು. ಎಸ್.ಓಂಕಾರಸ್ವಾಮಿ ನಿರೂಪಿಸಿದರು.
ಸಾಹಿತ್ಯ ಸಂಶೋಧಕರಾದ ಡಾ. ಎ.ಎಸ್. ವಾಲಿ ಮಾತನಾಡಿ, ಶಿವಜ್ಞಾನದ ಅಕ್ಷಯ ಸಿದ್ಧಿಯಾದ ಶ್ರೀ ಗುರುವನ್ನು ಎಷ್ಟು ಕೊಂಡಾಡಿದರೂ ಕಡಿಮೆ. ಪರಶಿವನ ಸಾಕಾರ ರೂಪ ಗುರುವೆಂದು ವೀರಶೈವ ಧರ್ಮ ಹೇಳುತ್ತದೆ. ಶಿವ ಪಥವನರಿಯಲು ಗುರು ಪಥವೇ ಮೊದಲು ಎಂದು ಭಕ್ತಿ ಭಂಡಾರಿ ಬಸವಣ್ಣನವರು ಹೇಳಿದ್ದುಂಟು. ನಂಬಿದವರ ಬಾಳಿನಲ್ಲಿ ಶ್ರೀ ಗುರು ಅದ್ಭುತ ಶಕ್ತಿ ತುಂಬಿ ಉಜ್ವಲ ಬಾಳಿಗೆ ಬಲವನ್ನು ದೊರಕಿಸಿಕೊಡುವಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರಾಗಲಿ ಶ್ರೀ ಜಗದ್ಗುರು ರೇವಣಸಿದ್ಧೇಶ್ವರರಾಗಲಿ ಧಾರ್ಮಿಕ ಕ್ರಾಂತಿಯ ಜೊತೆಗೆ ಸಾಮಾಜಿಕ ಸತ್ಕ್ರಾಂತಿಗೈದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.