ಸಂಗೀತ ನಿರ್ದೇಶಕ ಇಳಯರಾಜ ಕಳೆದ ಕೆಲ ವರ್ಷಗಳಿಂದ ಹಲವು ಸಿನಿಮಾ, ಸಂಗೀತ ನಿರ್ದೇಶಕ, ಗಾಯಕರುಗಳ ಮೇಲೆ ಕೃತಿಚೌರ್ಯದ ಪ್ರಕರಣ ದಾಖಲಿಸುತ್ತಾ ಬಂದಿದ್ದಾರೆ. ಇದೀಗ ತಮಿಳಿನ ಸ್ಟಾರ್ ನಟ ಅಜಿತ್ ನಟನೆಯ ಹೊಸ ಸಿನಿಮಾ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದ ವಿರುದ್ಧ ದೂರು ದಾಖಲಿಸಿದ್ದು, ಐದು ಕೋಟಿ ರೂಪಾಯಿ ಪರಿಹಾರ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರೆ.
ಅಜಿತ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ಸಾಧಾರಣ ಕಲೆಕ್ಷನ್ ಮಾಡಿದೆ. ಸಿನಿಮಾದಲ್ಲಿ ಕೆಲವು ಹಳೆಯ ಹಾಡುಗಳನ್ನು ನಿರ್ದೇಶಕರು ಬಳಸಿದ್ದಾರೆ. ಆದರೆ ಇದೇ ಅವರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದಲ್ಲಿ ಇಳಯರಾಜ ಸಂಗೀತ ನೀಡಿರುವ ತಮಿಳು ಹಾಡುಗಳಾದ ‘ಒತ್ತ ರೂಪ ತಾರೆನ್’, ‘ಇಲಮೈ ಇದೋ ಇದೋ’, ‘ಎನ್ ಜೋಡಿ ಮಂಜ ಕುರುವಿ’ ಹಾಡುಗಳನ್ನು ಬಳಸಿಕೊಳ್ಳಲಾಗಿದೆ ಎಂದು ಇಳಯರಾಜ ಆರೋಪಿಸಿದ್ದಾರೆ.
ಇಳಯರಾಜ ಅವರು ಇತ್ತೀಚೆಗೆ ಹಲವು ಚಿತ್ರತಂಡಗಳಿಗೆ ಈ ರೀತಿಯ ನೊಟೀಸ್ಗಳನ್ನು ನೀಡಿ ಹಣ ವಸೂಲಿ ಮಾಡಿದ್ದಾರೆ. ‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾದ ಜೊತೆಗೂ ಸಹ ಇಳಯರಾಜ ಅವರು ಕಾನೂನು ಹೋರಾಟ ಮಾಡಿದ್ದರು. ಆ ಸಿನಿಮಾದಲ್ಲಿ ಇಳಯರಾಜ ಅವರ ‘ಕಣ್ಮನಿ’ ಹಾಡನ್ನು ಬಳಸಲಾಗಿತ್ತು. ಇನ್ನೂ ಬಿಡುಗಡೆ ಆಗದ ರಜನೀಕಾಂತ್ರ ‘ಕೂಲಿ’ ಸಿನಿಮಾಕ್ಕೂ ಇಳಯರಾಜ ನೊಟೀಸ್ ಕಳಿಸಿದ್ದಾರೆ. ‘ಕೂಲಿ’ ಸಿನಿಮಾದ ಟೀಸರ್ನಲ್ಲಿ ಇಳಯರಾಜ ಅವರ ಸಂಗೀತ ಬಳಸಿಕೊಳ್ಳಲಾಗಿದೆ. ಇನ್ನೂ ಕೆಲ ಸಿನಿಮಾಗಳ ಮೇಲೆ ಇಳಯರಾಜ ದೂರುಗಳನ್ನು ದಾಖಲಿಸಿದ್ದಾರೆ. ಇದೀಗ ಅಜಿತ್ ಸಿನಿಮಾದ ವಿರುದ್ಧವು ಇಳಯರಾಜ ತಿರುಗಿ ಬಿದ್ದಿದ್ದಾರೆ.