ಮಂಗಳೂರು: ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಉಳ್ಳಾಲ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೆಯ ಹಿನ್ನೆಲೆ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಪುತ್ತೂರಿನ ಬಿಜೆಪಿ ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಸೇರಿದಂತೆ ಒಟ್ಟು 27 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ನೇತೃತ್ವದ ಪೊಲೀಸ್ ತಂಡ ಭಾನುವಾರ ದಾಳಿ ನಡೆಸಿದ್ದು, ಸುಮಾರು 20 ಕೋಳಿಗಳನ್ನು ವಶಪಡಿಸಿಕೊಂಡಿದೆ. ಕೋಳಿ ಅಂಕ ನಿಷೇಧದ ಬಗ್ಗೆ ತಿಳಿಸಿದ್ದರೂ ಸ್ಥಳದಲ್ಲಿದ್ದವರು ತೆರಳಲು ನಿರಾಕರಿಸಿದ್ದು, ಮಾಜಿ ಶಾಸಕ ಸೇರಿದಂತೆ ಕೆಲವರು ಕೋಳಿ ಅಂಕ ಮುಂದುವರಿಸಲು ಜನರನ್ನು ಪ್ರಚೋದಿಸಿದ್ದಾರೆ ಎಂಬ ಆರೋಪದಡಿ ಭಾರತೀಯ ನ್ಯಾಯ ಸಂಹಿತೆ 2023ರ ವಿವಿಧ ಕಲಂಗಳು ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.



