ವಿಜಯಸಾಕ್ಷಿ ಸುದ್ದಿ, ಡಂಬಳ: ಅಧಿಕಾರಿಗಳ ಭಯ-ಭೀತಿ ಇಲ್ಲದೆ ಅನಧಿಕೃತವಾಗಿ ಮದ್ಯ ಮಾರಾಟ ಅವ್ಯಾಹತವಾಗಿ ನಡೆದಿದ್ದು, ಮದ್ಯ ವ್ಯಸನಿಗಳು ತಂಡ ತಂಡವಾಗಿ ಮದ್ಯ ಸೇವಿಸಿ ಚರಂಡಿ, ರಸ್ತೆ ಬದಿಯ ಮುಳ್ಳುಕಂಟಿಗಳಲ್ಲಿ ಬೀಳುವುದು ಸಾಮಾನ್ಯವಾಗಿದೆ.
ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಡಂಬಳ ಗ್ರಾಮದಲ್ಲಿ ಅನಧಿಕೃತ ಮದ್ಯ ಮಾರಾಟದ ಅಡ್ಡೆಗಳು ಓಣಿ ಓಣಿಗಳಲ್ಲಿ ಸೃಷ್ಟಿಯಾಗಿದ್ದಾರೆ. ಡಂಬಳ ಬಸ್ ನಿಲ್ದಾಣ, ಮುಖ್ಯ ಬಜಾರ, ಜನತಾ ಪ್ಲಾಟ್, ಅಂಬೇಡ್ಕರ್ ಕಾಲೋನಿ, ಚವಡಿ, ಸ್ಮಶಾನಕ್ಕೆ ಹೋಗುವ ದಾರಿ ಹತ್ತಿರ ಸೇರಿದಂತೆ ಕುಡುಕರಿಗೆ ಬೇಕಾದಂತೆ ಮದ್ಯ ಮಾರಾಟ ನಡೆಯುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ.
ಮದ್ಯ ಮಾರಾಟಕ್ಕಾಗಿ ಅಬಕಾರಿ ಇಲಾಖೆ ರೂಪಿಸಿರುವ ಕಾನೂನುಗಳನ್ನು ಗಾಳಿಗೆ ತೂರಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಹೋಬಳಿಯ ಪ್ರತಿ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟದಿಂದ ಈ ಗ್ರಾಮಗಳ ಬಡ ಕುಟುಂಬದ ಮಹಿಳೆಯರ ಮಾಂಗಲ್ಯ, ಕಿವಿಯೋಲೆ, ಮನೆಯಲ್ಲಿನ ಪಾತ್ರೆಗಳೂ ಬಿಕರಿಯಾಗಿದ್ದಲ್ಲದೆ, ಕೆಲ ಮದ್ಯ ವ್ಯಸನಿಗಳು ಸರ್ಕಾರ ನೀಡಿದ ಗೃಹಲಕ್ಷ್ಮೀ ಹಣಕ್ಕೆ ಕೈ ಹಾಕಿದ್ದಾರೆ, ಹಣ ಕೊಡಲು ನಿರಾಕರಿಸಿದರೆ ಮಹಿಳೆಯರ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಾರೆ ಎಂಬ ಅಳಲುಗಳು ಕೇಳತೊಡಗಿವೆ.
ಈ ಬಗ್ಗೆ ಸಾಮಾಜಿಕ ಹೋರಾಟಗಾರ ಗೋಣಿಬಸಪ್ಪ ಎಸ್.ಕೊರ್ಲಹಳ್ಳಿ ಪ್ರತಿಕ್ರಿಯಿಸಿ, ಮುಂಡರಗಿ ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆದಿದ್ದು, ಇದನ್ನು ಅಬಕಾರಿ ಇಲಾಖೆ ತಡೆಯದಿದ್ದರೆ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಹೋರಾಟ ಮಾಡಲಾಗುವುದು ಎಂದಿದ್ದಾರೆ.
“ಈಗಾಗಲೇ ಮುಂಡರಗಿ ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟಗಾರರ ಮೇಲೆ ಕೇಸ್ ದಾಖಲಿಸಿದ್ದು, ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗುತ್ತೇವೆ”
– ಸುವರ್ಣಾ.
ಅಬಕಾರಿ ಅಧಿಕಾರಿ, ಮುಂಡರಗಿ.