ಗದಗ:- ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಕೋರರಿಗೆ ಹೇಳೋರು ಕೇಳೋರು ಇಲ್ಲದಂತಾಗಿದೆ. ಅವ್ರು ಆಡಿದ್ದೇ ಆಟವಾಗಿದೆ. ಅದರಂತೆ ಜಿಲ್ಲೆಯ ಮುಂಡರಗಿ ತಾಲೂಕಿನ ತುಂಗಭದ್ರಾ ನದಿ ತೀರದಲ್ಲಿ ಅಕ್ರಮ ಮರಳು ಸಂಗ್ರಹ ಮಾಡುವ ಕೆಲಸ ಭರ್ಜರಿಯಾಗಿ ನಡೆದಿದೆ. ಹಗಲು, ರಾತ್ರಿ ಎನ್ನದೇ ದುಷ್ಕರ್ಮಿಗಳು, ಮರಳು ಲೂಟಿ ನಡೆಸಿದ್ದಾರೆ.
ಹೀಗಾಗಿ ಖಚಿತ ಮಾಹಿತಿ ಆಧರಿಸಿ ಬೆಳ್ಳಂ ಬೆಳಗ್ಗೆ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್ ಅವರು ದಾಳಿ ನಡೆಸಿ ಅಕ್ರಮ ಮರಳು ದಂಧೆಕೋರರಿಗೆ ಶಾಕ್ ಕೊಟ್ಟಿದ್ದಾರೆ.
ಈ ದಂಧೆಕೋರರು, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರ ಗ್ರಾಮದ ಬಳಿಯ ತುಂಗಭದ್ರಾ ನದಿ ಬಗೆದು ಅಕ್ರಮ ಮರಳು ಲೂಟಿ ಮಾಡುತ್ತಿದ್ದರು. ಕಳೆದ ಒಂದು ತಿಂಗಳಿಂದ ರಾಜಾರೋಷವಾಗಿ ನದಿಯಲ್ಲಿ ಈ ಕೃತ್ಯ ಎಸಗುತ್ತಿದ್ದರು.
ಇದನ್ನೂ ಓದಿ ಗದಗ: ಬಡ್ಡಿ ದಂಧೆಕೋರರ ಮನೆ ಮೇಲೆ ಮುಂದುವರಿದ ದಾಳಿ; ಯಲ್ಲಪ್ಪ ಮಿಸ್ಕಿನ್ ದಂಧೆಗೆ ಖಾಕಿ ಬ್ರೇಕ್!
ಇನ್ನೂ ಅಕ್ರಮ ಮರಳು ದಂಧೆ ಬಗ್ಗೆ ಮಾಹಿತಿ ಇದ್ರೂ ತಾಲೂಕಾಡಳಿತ ಮಾತ್ರ ಕಂಡು ಕಾಣದಂತೆ ಮೌನವಹಿಸಿತ್ತು. ಅಷ್ಟೇ ಅಲ್ಲದೇ ಮುಂಡರಗಿ ಕಂದಾಯ ಇಲಾಖೆ ಅಧಿಕಾರಿಗಳು, ಅಕ್ರಮ ಮರಳು ದಂಧೆಕೋರರ ಜೊತೆ ಶಾಮೀಲಾಗಿರುವ ಆರೋಪವೂ ಕೇಳಿ ಬಂದಿತ್ತು. ಹೀಗಾಗಿ ದೂರು ಆಧರಿಸಿ ಸ್ವತಃ ಗದಗ ಡಿಸಿ ಸಿ ಎನ್ ಶ್ರೀಧರ್, ಎಸಿ ಗಂಗಪ್ಪ ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ನಡೆಸಿದ್ದು, ಖಾಸಗಿ ವಾಹನದಲ್ಲಿ ತೆರಳಿ ದಂಧೆಕೋರರಿಗೆ ಶಾಕ್ ನೀಡಿದರು. ದಾಳಿ ವೇಳೆ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಎರಡು ಟ್ರ್ಯಾಕ್ಟರ್ ಗಳು ಸೇರಿ ಅಕ್ರಮವಾಗಿ ಸಂಗ್ರಹಿಸಿದ ಅಪಾರ ಪ್ರಮಾಣದ ಮರಳು ಸೀಜ್ ಮಾಡಿದ್ದಾರೆ.
ಡಿಸಿ ದಾಳಿ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಮುಂಡರಗಿ ತಹಸೀಲ್ದಾರ್ ಯರ್ರಿಸ್ವಾಮಿ ದೌಡಾಯಿಸಿದರು. ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ ಅವರಿಗೆ ಅಕ್ರಮ ಮರಳು ದಂಧೆ ನಡೆಯದಂತೆ ನೋಡಿಕೊಳ್ಳುವಂತೆ ತಾಕೀತು ಮಾಡಿದರು.