ಗೋವಾದಿಂದ ತೆಲಂಗಾಣಕ್ಕೆ ಅಕ್ರಮವಾಗಿ ಮದ್ಯ ಸಾಗಣೆ: ₹43 ಲಕ್ಷ ಮೌಲ್ಯದ ಮದ್ಯ ಜಪ್ತಿ

0
Spread the love

ಬೆಳಗಾವಿ: ಅಬಕಾರಿ ಅಧಿಕಾರಿಗಳು ಭಾನುವಾರ ಬೆಳಿಗ್ಗೆ ಕಾರ್ಯಾಚರಣೆ ಕೈಗೊಂಡಿದ್ದು, ಗೋವಾದಿಂದ ತೆಲಂಗಾಣಕ್ಕೆ ದುಬಾರಿ ಮದ್ಯವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಪ್ರಕರಣ ಭೇದಿಸಿದ್ದಾರೆ.

Advertisement

43 ಲಕ್ಷ ರೂ. ಮೌಲ್ಯದ ಮದ್ಯ ಹಾಗೂ ಲಾರಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ. ಈ ಹಿಂದೆ ಪ್ಲೈವುಡ್‌ ಮತ್ತು ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ ಮಧ್ಯೆ ಮದ್ಯದ ಬಾಟಲಿಗಳನ್ನಿಟ್ಟು ಸಾಗಣೆ ಮಾಡುತ್ತಿದ್ದ ಎರಡು ಪ್ರಕರಣಗಳನ್ನು ಭೇದಿಸಿದ್ದ ಅಧಿಕಾರಿಗಳು, ಇದೀಗ ಮತ್ತೊಂದು ಪ್ರಕರಣ ಪತ್ತೆ ಮಾಡಿದ್ದಾರೆ.

ಬೆಳಿಗ್ಗೆ 3.30ರ ಸುಮಾರಿಗೆ ಬೆಳಗಾವಿ ತಾಲೂಕಿನ ಪೀರನವಾಡಿ ಕ್ರಾಸ್‌ ಹತ್ತಿರ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ್ದು, ಚಾಲಕ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಲಾರಿ ತಪಾಸಣೆ ನಡೆಸಿದಾಗ ಅಕ್ರಮ ಗೋವಾ ಮದ್ಯ ಸಾಗಿಸುತ್ತಿರುವುದು ಖಚಿತವಾಗಿದೆ. 43,93,700 ರೂ. ಮೌಲ್ಯದ ಮದ್ಯ ಹಾಗೂ ಸಾಗಣೆಗೆ ಉಪಯೋಗಿಸಿದ್ದ 20 ಲಕ್ಷ ರೂ ಮೌಲ್ಯದ ಲಾರಿ ಜಪ್ತಿ ಮಾಡಲಾಗಿದೆ.

ಗೋವಾದಿಂದ ತೆಲಂಗಾಣಕ್ಕೆ ಸಾಗಣೆ ಮಾಡುವ ಉದ್ದೇಶದಿಂದ ಲಾರಿಯಲ್ಲಿ 21 ವಿವಿಧ ಕಂಪನಿಯ ದುಬಾರಿ ಬೆಲೆಯ ಮದ್ಯದ 250 ಬಾಕ್ಸ್‌ಗಳನ್ನು ಮೊದಲಿಗೆ ಇಟ್ಟಿದ್ದಾರೆ. ಈ ಬಾಕ್ಸ್‌ಗಳ ಮೇಲೆ ಯಾರಿಗೂ ಅನುಮಾನ‌ ಬಾರದಂತೆ ಖಾಲಿ ರಟ್ಟು ಮತ್ತು ಪೇಪರ್ಗಳನ್ನು ಹೊಂದಿಸಿಟ್ಟಿದ್ದರು. ಆದರೆ ಅಬಕಾರಿ‌ ಅಧಿಕಾರಿಗಳ ಕರ್ತವ್ಯಪ್ರಜ್ಞೆ, ಚಾಣಾಕ್ಷತನದಿಂದ ದಾಳಿ ಮಾಡಿದ್ದರಿಂದ ಆರೋಪಿಗಳ ಯತ್ನ ವಿಫಲವಾಗಿದೆ.

ಅಪರ ಅಬಕಾರಿ ಆಯುಕ್ತ ಡಾ.ವೈ.ಮಂಜುನಾಥ್, ಜಂಟಿ ಆಯುಕ್ತ ಫಿರೋಜ್ ಖಾನ್ ಕಿಲ್ಲೆದಾರ್, ಉಪ ಆಯುಕ್ತೆ ವನಜಾಕ್ಷಿ ಎಂ. ಮಾರ್ಗದರ್ಶನದ ಮೇರೆಗೆ ದಾಳಿ ಮಾಡಲಾಗಿದೆ.

ಉಪ ಅಧೀಕ್ಷಕ ರವಿ ಮುರಗೋಡ ನೇತೃತ್ವ ವಹಿಸಿದ್ದರು. ತಂಡದಲ್ಲಿ ನಿರೀಕ್ಷಕ‌ ಮಂಜುನಾಥ್ ಮೆಳ್ಳಿಗೇರಿ ಹಾಗೂ ಉಪ ನಿರೀಕ್ಷಕಿ ಜ್ಯೋತಿ ಕುಂಬಾರ, ಪುಷ್ಪಾ ಗಡಾದೆ ಹಾಗೂ ಸಿಬ್ಬಂದಿ ಪರಸಪ್ಪ ತಿಗಡಿ, ಆನಂದ ಪಾಟೀಲ, ವಿನಾಯಕ ಭೋರಣ್ಣವರ, ಬಸವರಾಜ್.ಡಿ. ಭಾಗವಹಿಸಿದ್ದರು.

ಕಳೆದ ಎರಡು ಪ್ರಕರಣಗಳಿಗಿಂತ ಇದು ವಿಶೇಷ ಪ್ರಕರಣವಾಗಿದೆ. ಇದರಲ್ಲಿ ಅತ್ಯಂತ ದುಬಾರಿ ಬೆಲೆಯ ಮದ್ಯದ ಬಾಟಲಿಗಳನ್ನು ತೆಲಂಗಾಣಕ್ಕೆ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿತ್ತು. ಈ ಹಿಂದೆ ದಾಳಿ ಮಾಡಿದ ವೇಳೆಯೂ ಮೊದಲನೇ ಗಾಡಿ ಬಳ್ಳಾರಿ ಮತ್ತು ತೆಲಂಗಾಣಕ್ಕೆ, ಎರಡನೇ ಗಾಡಿ ತೆಲಂಗಾಣ, ಈಗ ಮೂರನೇ ಗಾಡಿಯೂ ತೆಲಂಗಾಣಕ್ಕೆ ಹೊರಟಿದೆ.

ಮದ್ಯ ಜಪ್ತಿ ಮಾಡಿಕೊಳ್ಳಲಾಗಿದ್ದು, ಅಕ್ರಮ ಸಾಗಣೆ ಬಗ್ಗೆ ತನಿಖೆ ಮುಂದುವರಿಸಿದ್ದೇವೆ ಎಂದು ಅಬಕಾರಿ ಅಪರ ಆಯುಕ್ತ ಡಾ.ವೈ.ಮಂಜುನಾಥ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here