ರಾಯಚೂರು:- ಜಿಲ್ಲೆಯ ಲಿಂಗಸುಗೂರು ತಹಸೀಲ್ದಾರ್ ಕಚೇರಿಯಲ್ಲಿ ಎಸ್ ಡಿಎ ಆಗಿ ಕೆಲಸ ನಿರ್ವಹಿಸುತ್ತಿದ್ದ ಯಲ್ಲಪ್ಪನ ವಿರುದ್ಧ ಆಕ್ರಮ ಹಣ ವರ್ಗಾವಣೆಯ ಆರೋಪ ಕೇಳಿ ಬಂದಿದೆ.
ತಹಸೀಲ್ದಾರ್ ಕಾರ್ಯಾಲಯದ ಖಾತೆಗಳಲ್ಲಿನ 1 ಕೋಟಿ 87 ಲಕ್ಷ ರೂಪಾಯಿ ವಂಚನೆ ಮಾಡಿದ್ದು, ಇದೀಗ ಘಟನೆ ಸಂಬಂಧ ದೂರು ದಾಖಲಾಗಿದೆ. ಹೌದು, ಈತ ಲಿಂಗಸುಗೂರಿನ ಖಾಸಗಿ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ಜೊತೆ ಶಾಮೀಲಾಗಿ ವಂಚನೆ ಎಸಗಿದ ಆರೋಪ ಕೇಳಿ ಬಂದಿದೆ. ಅಲ್ಲದೇ ಸರ್ಕಾರಿ ಹಣವನ್ನು ತನ್ನ ಮಗ, ಮಗಳು, ಪತ್ನಿ ಹೆಸರಿಗೆ ಅಕ್ರಮವಾಗಿ ವರ್ಗಾವಣೆ ಮಾಡಿ, ಕರ್ತವ್ಯಕ್ಕೆ ದ್ರೋಹ ಬಗೆದಿದ್ದಾನೆ.
ಮುಜರಾಯಿ ಇಲಾಖೆ ದೇವಸ್ಥಾನಗಳ ಅರ್ಚಕರಿಗೆ ಪಾವತಿಸಬೇಕಿದ್ದ ಹಣ ಹಾಗೂ ನೈಸರ್ಗಿಕ ವಿಕೋಪದ ಪರಿಹಾರದ ಹಣ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಪ್ರಕರಣದ ಪ್ರಮುಖ ಆರೋಪಿ ಯಲ್ಲಪ್ಪ ತನ್ನ ಮಗ ವಿಶಾಲ್ ಹೆಸರಿನ ವಿಶಾಲ್ ಡೆಕೋರೇಟರ್ಸ್ ಗೆ 1 ಕೋಟಿ 98 ಸಾವಿರ, ಮಗಳಾದ ದೀಪಾ ಹೆಸರಿನ ದೀಪಾ ಟೆಕ್ಸ್ ಟೈಲ್ಸ್ ಹೆಸರಿನ ಖಾತೆಗೆ 31 ಲಕ್ಷ, ಪತ್ನಿ ನಿರ್ಮಲಾ ಹೆಸರಿನ ನಿರ್ಮಲಾ ಡಿಜಿಟಲ್ಸ್ ಖಾತೆಗೆ 18 ಲಕ್ಷ ವರ್ಗಾವಣೆ ಮಾಡಿದ್ದಾನೆ. ಆ ಬಳಿಕ ಸಂಶಯ ಬಾರದಂತೆ ಮೂಲ ಖಾತೆಯ ಹಣವನ್ನು ಕಾರ್ಯಾಲಯದ ಸೆನ್ಸಸ್ ಖಾತೆಗೆ ಜಮೆ ಮಾಡಿದ್ದಾನೆ. ಬಳಿಕ ತಹಸೀಲ್ದಾರ್ ಕಾರ್ಯಾಲಯದ ಖಾತೆಗಳನ್ನ ಮುಕ್ತಾಯಗೊಳಿಸಲು ಬ್ಯಾಂಕ್ ಗೆ ಮನವಿ ಮಾಡಿದ್ದಾನೆ. ಈ ಬಗ್ಗೆ ಲಿಂಗಸುಗೂರು ತಹಸೀಲ್ದಾರ್ ಶಂಶಾಲಂರಿಂದ ದೂರು ನೀಡಲಾಗಿದ್ದು, ದೂರಿನ ಅನ್ವಯ ಎಸ್ ಡಿಎ ಯಲ್ಲಪ್ಪ, ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಲಿಂಗಸುಗೂರು ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.


