ಗದಗ:- ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ಪ್ಯಾಕೆಟ್ ಗಳನ್ನು ಗೂಡ್ಸ್ ವಾಹನ ಸಮೇತ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಗದಗ ಜಿಲ್ಲೆಯ ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಘಟನೆ ಸಂಬಂಧ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಡ್ರೈವರ್ ಸಂತೋಷ ದೌಲತ್ ರಾವ್ ಶಿಂಧೆ ಹಾಗೂ ಬೆಟಗೇರಿಯ ಬಣ್ಣದ ನಗರ ನಿವಾಸಿ, ದಂಧೆಕೋರ ಖಾಜಾಹುಸೇನ್ ತಂದೆ ರಾಯಸಾಬ್ ಖಾದರನ್ನವರ್ ಎಂಬುವವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿಗಳು ಅಂಗನವಾಡಿ ಹಾಗೂ ಶಾಲೆಗಳಿಗೆ ಪೂರೈಕೆ ಮಾಡಿದ್ದ ಕೆ.ಎಮ್.ಎಫ್ ನಿಂದ ಸಾಗಾಟವಾಗಿರುವ ನಂದಿನಿ ಬ್ರಾಂಡ್ ನ ಹಾಲಿನ ಪೌಡರ್ ಪ್ಯಾಕೆಟ್ ಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಕಳೆದ ಹಲವು ದಿನಗಳಿಂದ ಈ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ.
ಇಂದು ಬೆಳಿಗ್ಗೆ ಗದಗ ನಗರದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ಸಾಗಿಸುತ್ತಿದ್ದಾಗ ಹಳೆ ಪಂಟರನೊಬ್ಬ ನೀಡಿದ ಖಚಿತ ಮಾಹಿತಿ ಮೇರೆಗೆ ಬೆಟಗೇರಿ ಪೊಲೀಸರು, ಶಿಕ್ಷಣ ಇಲಾಖೆ ಜೊತೆ ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮ ಹಾಲಿನ ಪೌಡರ್ ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ 1 ಲಕ್ಷ 12 ಸಾವಿರ ಮೌಲ್ಯದ 313 ಕೆಜಿ ಹಾಲಿನ ಪುಡಿ ಹಾಗೂ ಮಿನಿ ಲಾರಿಯನ್ನು ಸೀಜ್ ಮಾಡಲಾಗಿದೆ. ಘಟನೆ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಟಗೇರಿ ಠಾಣಾ ಪಿಎಸ್ಐ ಲಕ್ಷ್ಮಣ್ಣ ಆರಿ ಹಾಗೂ ಸಿಬ್ಬಂದಿ ಇದ್ದರು.



