ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯ ಸರ್ಕಾರ ಬಡವರಿಗಾಗಿ ನೀಡುವ ಅನ್ನಭಾಗ್ಯ ಅಕ್ಕಿಯ ಅಕ್ರಮ ಮಾರಾಟ ಗದಗ ಜಿಲ್ಲೆಯಾದ್ಯಂತ ಅವ್ಯಾಹತವಾಗಿ ನಡೆಯುತ್ತಿದ್ದು, ಹಲವಾರು ಬಾರಿ ಪ್ರಕರಣಗಳು ದಾಖಲಾಗುತ್ತಿದ್ದರೂ ಅದು ಕೇವಲ ಕಾಟಾಚಾರಕ್ಕೆ ಎನ್ನುವಂತಾಗಿದೆ.
ಅಕ್ರಮ ಅಕ್ಕಿ ಮಾರಾಟ, ಸಾಗಾಟದಲ್ಲಿರುವ ಕಿಂಗ್‌ಪಿನ್‌ಗಳು ಮಾತ್ರ ಪ್ರತಿ ಬಾರಿಯೂ ಬಚಾವಾಗುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಅಕ್ರಮ ಅಕ್ಕಿ ಸಾಗಾಟ ಪ್ರಕರಣಗಳು ರೋಣ, ಮುಂಡರಗಿ ತಾಲೂಕಿನಲ್ಲಿ ನಡೆದಿದ್ದರೂ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ, ಏನೂ ನಡೆದೇ ಇಲ್ಲವೆಂಬಂತೆ ಆಹಾರ ಇಲಾಖೆ ಅಧಿಕಾರಿಗಳ ವರ್ತನೆಯಿದೆ.
ಈ ನಡುವೆ ಗದಗ ತಾಲೂಕಿನ ನರಸಾಪೂರ ಗ್ರಾಮದ ಗೋಡೌನ್‌ನಲ್ಲಿ 50 ಚೀಲಕ್ಕೂ ಅಧಿಕ ಅಕ್ಕಿ ಸಂಗ್ರಹಿಸಿರುವುದು ಪತ್ತೆಯಾಗಿದೆ. ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಗುರುವಾರ ಸಂಜೆಯವರೆಗೂ ಪ್ರಕರಣ ಮಾತ್ರ ದಾಖಲಾಗಿರಲಿಲ್ಲ.
ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಧ್ಯ ನಡೆಯುತ್ತಿರುವ ಅಕ್ರಮ ಅಕ್ಕಿ ದಂಧೆಯನ್ನು ಅತ್ಯಂತ ಪ್ರಭಾವಿಗಳೇ ನಡೆಸುತ್ತಿದ್ದಾರೆ. ಇವರಿಗೆ ಪ್ರಭಾವಿ ವ್ಯಕ್ತಿಗಳ ಕೃಪಾಶೀರ್ವಾದವಿದ್ದು, ಯಾವುದೇ ಸಮಸ್ಯೆ ಎದುರಾದರೂ ಪ್ರಭಾವಿಗಳೇ ಮುಂದೆ ನಿಂತು ಸಮಸ್ಯೆ ಇತ್ಯರ್ಥಪಡಿಸಿ ಮತ್ತೆ ಅವರನ್ನು ಅಕ್ರಮ ಅಕ್ಕಿ ದಂಧೆಗೆ ಅನುವು ಮಾಡಿಕೊಡುತ್ತಿದ್ದಾರೆಂಬ ಮಾತುಗಳು ಅವಳಿ ನಗರದ ತುಂಬೆಲ್ಲ ಕೇಳಿಬರುತ್ತಿವೆ.
ಅನ್ನಭಾಗ್ಯ ಪ್ರಕರಣಗಳ ಸಂಖ್ಯೆ
2024ರ ಏಪ್ರಿಲ್‌ನಿಂದ ಈವರೆಗೆ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ 6 ಪ್ರಕರಣ ದಾಖಲಾಗಿದೆ. ಗದಗ ತಾಲೂಕಿನಲ್ಲಿ 3, ಮುಂಡರಗಿಯಲ್ಲಿ 2 ಹಾಗೂ ರೋಣದಲ್ಲಿ 1 ಪ್ರಕರಣ ದಾಖಲಿಸಿ ಒಟ್ಟು 5.82 ಲಕ್ಷ ರೂ ಮೌಲ್ಯದ 171.30 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಳ್ಳಲಾಗಿದ್ದು, 9 ಜನರ ಮೇಲೆ ಪ್ರಕರಣ ದಾಖಲಾಗಿದೆ. 1 ಲಕ್ಷ ರೂ ಮೌಲ್ಯದ ಎರಡು ವಾಹನಗಳನ್ನು ಜಪ್ತಿ ಮಾಡಲಾಗಿದೆ. ಎಲ್ಲಾ ಪ್ರಕರಣಗಳಲ್ಲಿಯೂ ಕೇವಲ ಚಾಲಕರ ಮೇಲೆ ಪ್ರಕರಣ ದಾಖಲಿಸಿ ಮೂಲ ಅಕ್ಕಿ ಸಾಗಾಟಗಾರರ ಮೇಲೆ ಪ್ರಕರಣ ದಾಖಲಿಸದೇ ಇರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.