ವಿಜಯಸಾಕ್ಷಿ ಸುದ್ದಿ, ಬೆಳಗಾವಿ, ಸುವರ್ಣಸೌಧ: ಮಹಾರಾಷ್ಟ್ರ ರಾಜ್ಯವು ನೀರಾವರಿ ಯೋಜನೆಗಳಿಗೆ ಅಕ್ರಮವಾಗಿ ನೀರು ಬಳಕೆ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯದ ಅಧಿಕಾರಿಗಳ ಪ್ರತ್ಯೇಕ ತಂಡ ರಚನೆ ಮಾಡಿ, ವರದಿ ಪಡೆಯಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಅವರು ವಿಧಾನ ಪರಿಷತ್‌ನಲ್ಲಿ ಶಾಸಕ ಡಾ. ತಳವಾರ್ ಸಾಬಣ್ಣ ಅವರ ನಿಯಮ 33ರ ಸೂಚನೆಗೆ ಉತ್ತರಿಸಿ ಮಾತನಾಡಿದರು.
ಕೃಷ್ಣ ಜಲವಿವಾದ ನ್ಯಾಯಾಧಿಕರಣ-1 (ಬಚಾವತ್ ನ್ಯಾಯಾಧಿಕರಣ) 1976ರಲ್ಲಿ ಅಂತಿಮ ತೀರ್ಪಿನ ಪ್ರಕಾರ ಮಹಾರಾಷ್ಟ್ರ ರಾಜ್ಯವು ಭೀಮಾ ನದಿಯಿಂದ 95 ಟಿಎಂಸಿಗಿಂತ ಹೆಚ್ಚಾಗಿ ನೀರನ್ನು ಬಳಸಬಾರದೆಂದು ಹಾಗೂ 3)(iii) ಪ್ರಕಾರ ಕರ್ನಾಟಕ ರಾಜ್ಯವು ಭೀಮಾ ಮುಖ್ಯ ನದಿಯಿಂದ 15 ಟಿಎಂಸಿಗಿಂತ ಹೆಚ್ಚು ಬಳಸಬಾರದೆಂದು ನಿರ್ಬಂಧವಿದೆ. ಸದರಿ ಅಂತಿಮ ತೀರ್ಪಿನಲ್ಲಿ ಕಣಿವೆ ಮಾಡಿರುವ ಒಟ್ಟಾರೆ ಹಂಚಿಕೆಯಲ್ಲಿ ಯಾವುದೇ ರಾಜ್ಯವು ಇನ್ನೊಂದು ರಾಜ್ಯಕ್ಕೆ ಬಿಡುಗಡೆ ಮಾಡುವ ಕುರಿತು ಆದೇಶವಿಲ್ಲ ಎಂದರು.
ಕರ್ನಾಟಕ ರಾಜ್ಯವು ಕೃಷ್ಣಾ ಜಲವಿವಾದ ನ್ಯಾಯಾಧಿಕರಣ-2ರ ಮುಂದೆ ಭೀಮಾ ನದಿ ಉಪ ಕೊಳ್ಳದಲ್ಲಿನ ಬಳಕೆಗಾಗಿ 12 ಟಿ.ಎಂ.ಸಿ ಹೆಚ್ಚುವರಿ ನೀರಿನ ಬೇಡಿಕೆಯನ್ನು ಮಂಡಿಸಿತ್ತು. ಆದರೆ ನ್ಯಾಯಾಧಿಕರಣವು ರಾಜ್ಯದ ಬೇಡಿಕೆಯನ್ನು ಪರಿಗಣಿಸಿಲ್ಲ. ಸದರಿ ಕೃಷ್ಣಾ ಜಲವಿವಾದ ನ್ಯಾಯಾಧಿಕರಣ-2ರ ಆದೇಶವು ಗೆಜೆಟ್ ಪ್ರಕಟಣೆ ಆಗಬೇಕಾಗಿದೆ ಎಂದು ತಿಳಿಸಿದರು.
ಕಳೆದ ವರ್ಷದ ಬೇಸಿಗೆಯಲ್ಲಿ ಭೀಮಾ ನದಿ ನೀರು ಸಂಪೂರ್ಣ ಬತ್ತಿಹೋಗಿದ್ದರಿಂದ, ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಯ ಜನರ ಕುಡಿಯುವ ನೀರು, ರೈತರ ಬೆಳೆಗಳಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯಾಗಿತ್ತು. ಪ್ರತಿ ವರ್ಷ ಭೀಮಾ ತೀರದ ಜನರು ಒಟ್ಟಾಗಿ ಅಮರಣಾಂತರ ಉಪವಾಸ ಸತ್ಯಾಗ್ರಹ ಮಾಡಿ ಕುಡಿಯಲು ಬೇಕಾಗುವ ನೀರನ್ನು ಬಿಡಿಸಿಕೊಳ್ಳುತ್ತಿದ್ದಾರೆ. ಕನಿಷ್ಠ ಕುಡಿಯುವ ನೀರಿಗೂ ಸಂಕಷ್ಟಕ್ಕೆ ಸಿಲುಕುತ್ತಿರುವ ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಯ ಜನರಿಗೆ 15 ಟಿಎಂಸಿ ನೀರನ್ನು ಸಮರ್ಪಕವಾಗಿ ಬಳಕೆಯಾಗಲು ಹಾಗೂ ಮಹಾರಾಷ್ಟ್ರದ ಅಕ್ರಮ ನೀರಾವರಿ ಯೋಜನೆಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಕುರಿತು ಡಾ. ತಳವಾರ್ ಸಾಬಣ್ಣ ಅವರು ಕೋರಿದ್ದರು.



