ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಂಬಾಕು ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮಗಳಾಗುತ್ತಿದ್ದು, ತಂಬಾಕಿನಿಂದ ವ್ಯಕ್ತಿಯಲ್ಲಿ ಮಾನಸಿಕ ಖಿನ್ನತೆ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಆವರಿಸಿಕೊಳ್ಳುತ್ತವೆ. ತಂಬಾಕಿನಿಂದ ಮಾಡಿದ ಉತ್ಪನ್ನಗಳಾದ ಗುಟ್ಕಾ, ಬೀಡಿ, ಸಿಗರೇಟು ಇತ್ಯಾದಿಗಳ ಚಟಕ್ಕೆ ಬಲಿಯಾಗುತ್ತಿರುವ ಯುವ ಜನಾಂಗ ಎಚ್ಚೆತ್ತು ಇವುಗಳಿಂದ ದೂರ ಇರಬೇಕೆಂದು ತಾಲೂಕು ವೈದ್ಯಾಧಿಕಾರಿ ಡಾ. ಸುಭಾಷ್ ದಾಯಗೊಂಡ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ, ಜಿಲ್ಲಾ ಸಮೀಕ್ಷಾಧಿಕಾರಿಗಳ ಕಚೇರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಐಇಸಿ ವಿಭಾಗ, ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿಗಳ ಕಚೇರಿ, ತಾಲೂಕಾ ಆರೋಗ್ಯ ಅಧಿಕಾರಿ ಕಚೇರಿ ಶಿರಹಟ್ಟಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಲಕ್ಷ್ಮೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ವಿಶ್ವ ತಂಬಾಕು ರಹಿತ ದಿನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ. ಪ್ರವೀಣ್‌ಕುಮಾರ್ ಸಜ್ಜನ್ ಮಾತನಾಡಿದರು. ಎಫ್.ಬಿ. ಹೂಗಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷ ತಂಬಾಕು ಸೇವನೆಯಿಂದ ಭಾರತದಲ್ಲಿ 10 ಲಕ್ಷ ಜನ ಸಾವನ್ನಪ್ಪುತ್ತಾರೆ. ಪ್ರತಿ 8 ಸೆಕೆಂಡಿಗೆ ಒಬ್ಬರು ಮರಣ ಹೊಂದುತ್ತಾರೆ. ಕರ್ನಾಟಕದಲ್ಲಿ ಶೇ.28 ಜನರು ತಂಬಾಕು ಸೇವನೆಯನ್ನು ಮಾಡುತ್ತಾರೆ ಎಂದು ತಿಳಿಸಿದರಲ್ಲದೆ, ತಂಬಾಕು ಸೇವನೆ ಮುಂಜಾಗ್ರತೆ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಮಂಜುಳಾ ಹೂಗಾರ್, ಶಿರಹಟ್ಟಿ ಡಿಓಟಿ ಎಫ್.ಸಿ. ಹೊಸಮಠ, ಗಂಗಾಧರ್ ಬಣಗಾರ, ರೇಣುಕಾ ಡೋಂಬರ್, ಸುಧಾ ಪಫ್ತಿ ಸೇರಿದಂತೆ ಸಾರ್ವಜನಿಕರು, ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ವಕೀಲ ಹಾಗೂ ಬಾಲ ನ್ಯಾಯ ಮಂಡಳಿ ಸದಸ್ಯ ಪಿ.ಎಂ. ವಾಲಿ ಮಾತನಾಡಿ, ತಂಬಾಕಿನಿAದ ಆಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ತಂಬಾಕು ನಿಷೇಧ ಕಾಯ್ದೆ ಹಾಗೂ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.



