ನವದೆಹಲಿ: ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ತೀವ್ರಗೊಂಡಿರುವುದರಿಂದ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಕೇಂದ್ರ ಸರ್ಕಾರ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.
ನಾಗರಿಕ ವಿಮಾನಯಾನ ಸಚಿವಾಲಯದ ಮಾಹಿತಿ ಪ್ರಕಾರ, ಪರ್ಯಾಯ ವಾಯುಪ್ರದೇಶಗಳ ಮೂಲಕ ಭಾರತೀಯರನ್ನು ಕರೆತರಲು ಕ್ರಮ ಕೈಗೊಳ್ಳಲಾಗಿದೆ. IndiGo ಏರ್ಲೈನ್ಸ್‌ನ 10 ವಿಶೇಷ ವಿಮಾನಗಳು ಮಂಗಳವಾರ ಜೆದ್ದಾಗೆ ತೆರಳಿ ಭಾರತೀಯರನ್ನು ಕರೆತರಲಿವೆ.
ಜೆದ್ದಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಇಂಡಿಗೋ ಸಮನ್ವಯದಲ್ಲಿದ್ದು, ಯಾವ ವಾಯುಮಾರ್ಗದ ಮೂಲಕ ಸುರಕ್ಷಿತ ಕಾರ್ಯಾಚರಣೆ ನಡೆಸಬಹುದು ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ. ಅಗತ್ಯವಿದ್ದಲ್ಲಿ ಹೆಚ್ಚುವರಿ ವಿಮಾನಗಳನ್ನು ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ನಿರ್ಬಂಧಿತ ವಾಯುಪ್ರದೇಶದ ಬದಲಿಗೆ ಪರ್ಯಾಯ ಮಾರ್ಗಗಳ ಮೂಲಕ ದೀರ್ಘ ಹಾಗೂ ಅತಿ ದೀರ್ಘ ದೂರದ ವಿಮಾನ ಸೇವೆಗಳನ್ನು ಹಂತ ಹಂತವಾಗಿ ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ವಿಮಾನಗಳು ಮತ್ತು ಸಿಬ್ಬಂದಿಯ ಮರುಸ್ಥಾಪನೆ ಪ್ರಕ್ರಿಯೆಯೂ ಮುಂದುವರಿದಿದೆ.
ಭಾರತ ಮತ್ತು ಗಲ್ಫ್ ರಾಷ್ಟ್ರಗಳ ನಡುವೆ ಸಂಚರಿಸುವ ವಿದೇಶಿ ವಿಮಾನ ಸಂಸ್ಥೆಗಳೂ ಮಿತ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಪ್ರಯಾಣಿಕರಿಗೆ ಪಾರದರ್ಶಕ ಮಾಹಿತಿ ನೀಡುವುದು, ರೀಫಂಡ್ ಮತ್ತು ಮರುನಿಗದಿ ಸೌಲಭ್ಯ ಒದಗಿಸುವುದು ಸೇರಿದಂತೆ ಅಗತ್ಯ ಸೇವೆಗಳನ್ನು ಕಲ್ಪಿಸಲು ಸೂಚಿಸಲಾಗಿದೆ.
ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ತಮ್ಮ ವಿಮಾನಗಳ ಸ್ಥಿತಿಯನ್ನು ಸಂಬಂಧಿತ ಏರ್ಲೈನ್ಸ್‌ಗಳ ಅಧಿಕೃತ ಮೂಲಗಳಿಂದ ಪರಿಶೀಲಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ಈ ನಿರ್ಧಾರವನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೈಗೊಳ್ಳಲಾಯಿತು. ಸಭೆಯಲ್ಲಿ ನಾಗರಿಕ ವಿಮಾನಯಾನ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.



